ಸವಣೂರು:ಶ್ರವಣರಂಗ ಪ್ರತಿಷ್ಠಾನ ಸವಣೂರು ವತಿಯಿಂದ ಯಕ್ಷಗಾನ ಭಾಗವತ ದಿ. ರಾಮಚಂದ್ರ ಅರ್ಬಿತ್ತಾಯ ಅವರ ಸ್ಮರಣಾರ್ಥ ನೀಡುವ ಶ್ರವಣಸ್ವರ ಪ್ರಶಸ್ತಿಯನ್ನುಯಕ್ಷಗಾನ ಹಾಡುಗಾರಿಕೆಯಲ್ಲಿ ಸಾಧನೆ ಮಾಡಿದ ರಚನಾ ಚಿದ್ದಲ್ ಅವರಿಗೆ ನೀಡಲಾಯಿತು.ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಕಾಲೇಜಿನಲ್ಲಿ
ಅಂತಿಮ ಬಿ.ಬಿ.ಎ ವ್ಯಾಸಂಗ ಮಾಡುತ್ತಿರುವ ರಚನಾ ಯಕ್ಷಗಾನ ಭಾಗವತಿಕೆ ಕ್ಷೇತ್ರದಲ್ಲಿ ಮಿಂಚುತ್ತಿರುವ ಪ್ರತಿಭೆ. ಸುಭಾಷ್ ಪಂಜ, ದಿ. ಪದ್ಯಾಣ ಗಣಪತಿ ಭಟ್ ಅವರಲ್ಲಿ ಭಾಗವತಿಕೆ ಕಲಿತ ಅವರು ಪ್ರಸ್ತುತ ವಿಶ್ವ ವಿನೋದ ಬನಾರಿ ಹಾಗೂ ಶ್ರೀ ವೆಂಕಟರಾಮ್ ಭಟ್ ಸುಳ್ಯ ಇವರಲ್ಲಿ ಪ್ರಸಂಗ ನಡೆಗಳನ್ನು ಅಭ್ಯಸಿಸುತ್ತಿದ್ದಾರೆ.ಹಲವಾರು ಯಕ್ಷಗಾನ, ತಾಳಮದ್ದಳೆ, ಗಾನವೈಭವಗಳಲ್ಲಿ ಜಿಲ್ಲೆ ಮತ್ತು ಹೊರಜಿಲ್ಲೆಗಳಲ್ಲಿ ಭಾಗವಹಿಸಿದ್ದಾರೆ. ಸಂಗೀತವನ್ನು ರೇಖಾ ರೇವತಿ ಹೊನ್ನಾಡಿ ಇವರಲ್ಲಿ ಅಭ್ಯಸಿಸಿ ಸೀನಿಯರ್ ಪರೀಕ್ಷೆಯನ್ನು ಪೂರೈಸಿ ಭರತನಾಟ್ಯವನ್ನು ಸ್ವಸ್ತಿಕಾ ರೈ ಇವರಲ್ಲಿ ಅಭ್ಯಸಿಸಿ ಜೂನಿಯರ್ ಪರೀಕ್ಷೆಯನ್ನು ಪೂರೈಸಿದ್ದಾರೆ. ಇವರ ಯಕ್ಷಸೇವೆಯನ್ನು ಗುರುತಿಸಿ ಶ್ರವಣರಂಗ ಶ್ರವಣಸ್ವರ ಪ್ರಶಸ್ತಿಯನ್ನು ಪಿ.ಎಂ.ಶ್ರೀ ಸ.ಹಿ.ಪ್ರಾ. ಶಾಲೆ, ವೀರಮಂಗಲ ಇಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.