ಮುಂಬೈ:ಈ ವಿಶ್ವ ಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಮಹಮ್ಮದ್ ಶಮಿ ಹಾಗು ವಿರಾಟ್ ಕೊಹ್ಲಿ ದಾಖಲೆ ನಿರ್ಮಿಸಿದ್ದಾರೆ. ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ ಏಕದಿನ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಗಳಿಸಿದ ಭಾರತದ ಬೌಲರ್ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.ವಾಂಖೆಡೆ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ
18 ರನ್ನಿಗೆ ಐದು ವಿಕೆಟ್ ಗಳಿಸಿದ ಶಮಿ, ಈ ಸ್ಮರಣೀಯ ಸಾಧನೆ ಮಾಡಿದ್ದಾರೆ. ಏಕದಿನ ವಿಶ್ವಕಪ್ನಲ್ಲಿ ಈವರೆಗೆ ಆಡಿರುವ 14 ಪಂದ್ಯಗಳಲ್ಲಿ ಶಮಿ ಒಟ್ಟು 45 ವಿಕೆಟ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಮಾಜಿ ವೇಗಿಗಳಾದ ಜಹೀರ್ ಖಾನ್ (44) ಹಾಗೂ ಕರ್ನಾಟಕದ ಜಾವಗಲ್ ಶ್ರೀನಾಥ್ (44) ದಾಖಲೆಯನ್ನು ಶಮಿ ಮುರಿದಿದ್ದಾರೆ. ಏಕದಿನ ವಿಶ್ವಕಪ್ನಲ್ಲಿ ಮೂರು ಬಾರಿ 5 ವಿಕೆಟ್ ಗೊಂಚಲು ಪಡೆದ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ದಾಖಲೆಯನ್ನು ಶಮಿ ಸರಿಗಟ್ಟಿದ್ದಾರೆ. ಈ ವಿಶ್ವಕಪ್ನಲ್ಲಿ ಎರಡು ಬಾರಿ 5 ವಿಕೆಟ್ ಗೊಂಚಲು ಪಡೆದ ಶಮಿ ಒಂದೇ ವಿಶ್ವಕಪ್ನಲ್ಲಿ ಎರಡು ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಒಟ್ಟು ವಿಶ್ವಕಪ್ನಲ್ಲಿ 3 ಬಾರಿ 5 ವಿಕೆಟ್ ಪಡೆದಿದ್ದಾರೆ.
ವಿರಾಟ್ ಕೊಹ್ಲಿ ಅವರು, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆಯನ್ನು ಮುರಿದಿದ್ದಾರೆ.
ವಾಂಖೆಡೆ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ (88) ಗಳಿಸಿದ್ದಾರೆ.ಈ ಮೂಲಕ 2023ನೇ ಸಾಲಿನಲ್ಲಿ ಏಕದಿನ ಕ್ರಿಕೆಟ್ನಲ್ಲಿ ಕೊಹ್ಲಿ ಸಹಸ್ರ ರನ್ಗಳ ಸಾಧನೆ ಮಾಡಿದ್ದಾರೆ.
ಅಲ್ಲದೆ ಏಕದಿನ ಕ್ರಿಕೆಟ್ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಎಂಟು ಸಲ 1,000ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಸಚಿನ್ ಏಳು ಬಾರಿ ಇದೇ ಸಾಧನೆ ಮಾಡಿದ್ದರು.











