ಸುಳ್ಯ:ಶಾಲಾ ಮಟ್ಟದ ಕ್ರೀಡಾ ಕೂಟಗಳಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ 14 ವರ್ಷ ವಯೋಮಾನ ನಿಗದಿಪಡಿಸಿರುವುದರಿಂದ ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಅವಕಾಶದಿಂದ ವಂಚಿತರಾಗುವ ಸಾಧ್ಯತೆ ಇದೆ. ಅದುದರಿಂದ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಶಾಲಾ ಕ್ರೀಡಾ ಕೂಟಗಳಲ್ಲಿ ಈ ಹಿಂದೆ ಅನುಸರಿಸುತ್ತಿದ್ದ ನಿಯಮವನ್ನೇ ಜಾರಿಗೆ ತರಬೇಕು ಎಂದು ಸುಳ್ಯ ತಾಲೂಕು ಎಸ್ಡಿಎಂಸಿ ಸಮನ್ವಯ ವೇದಿಕೆ ಒತ್ತಾಯಿಸಿದೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಎಸ್ಡಿಎಂಸಿ ಸಮನ್ವಯ ವೇದಿಕೆಯ ಅಧ್ಯಕ್ಷ ವೆಂಕಟ್ ದಂಬೆಕೋಡಿ ‘ಹಿಂದೆಲ್ಲಾ ಪ್ರಾಥಮಿಕ ಶಾಲಾ ಮಟ್ಟದ ಕ್ರೀಡಾಕೂಟ ಪ್ರಾಥಮಿಕ ಶಾಲಾ ಹಂತದ ವಿದ್ಯಾರ್ಥಿಗಳ ಮಧ್ಯೆ ನಡೆಯುತ್ತಿತ್ತು. ಅಂದರೆ ಒಂದನೇ ತರಗತಿಯಿಂದ 7ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಮಕ್ಕಳ ತಂಡ ರಚಿಸಿ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಭಾಗವಹಿಸುವ ಅವಕಾಶ ಇತ್ತು. ಇದೀಗ ನಿಯಮಗಳಲ್ಲಿ ವಯೋಮಾನದ ಮಾನದಂಡದಂತೆ 14 ವರ್ಷ ಮತ್ತು 17 ವರ್ಷ ಎಂದು ವಯಸ್ಸಿನ ಮಿತಿಯನ್ನು ನಿಗದಿಪಡಿಸಿರುವುದರಿಂದ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳು ಕೂಡ 14 ವರ್ಷದ ವಯೋಮಾನದ ವಿಭಾಗದಲ್ಲಿ ಸ್ಪರ್ಧಿಸಬಹುದಾಗಿದೆ. ಇದರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು ಒಟ್ಟಾಗಿ ಸ್ಪರ್ಧಿಸಬೇಕಾಗಿದೆ. ಇದರಿಂದ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು

ಗೆಲುವಿನ ಅವಕಾಶ ವಂಚಿತರಾಗುವ ಸಾಧ್ಯತೆ ಇದೆ. ಮಾತ್ರವಲ್ಲದೆ ಸುಳ್ಯ ತಾಲೂಕಿನಲ್ಲಿ ಯಾವುದೇ ಸರಕಾರಿ ಶಾಲೆಗಳು ಒಂದರಿಂದ 10ನೇ ತರಗತಿವರೆಗೆ ಒಂದಾಗಿರುವುದಿಲ್ಲ. ಇದರಿಂದ 8, 9ನೇ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಸರಕಾರಿ ಪ್ರಾಥಮಿಕ ಶಾಲಾ ತಂಡದಲ್ಲಿ ಸೇರಿಸಿಕೊಳ್ಳುವ ಅವಕಾಶ ಇಲ್ಲ. ಮಾತ್ರವಲ್ಲದೆ ಡಯಸ್ ನಂಬರ್ ತೊಂದರೆ ಕೂಡ ಉಂಟಾಗುತ್ತದೆ ಎಂದು ಹೇಳಿದರು. ಪ್ರಾಥಮಿಕ ಶಾಲೆಯ ಸಣ್ಣ ಮಕ್ಕಳು ಕ್ರೀಡಾ ಸ್ಪೂರ್ತಿಯಿಂದ ಕ್ರೀಡಾ ಸ್ಪರ್ಧೆಗಳಳ ಅಭ್ಯಾಸ ನಡೆಸುತ್ತದ್ದಾರೆ. ಆದುದರಿಂದ ವಯೋಮಾನದ ಮಾನದಂಡವನ್ನು ತೆಗೆದು ಈ ಹಿಂದೆ ಇದ್ದಂತೆ ಪ್ರಾಥಮಿಕ ಶಾಲಾ ಹಂತದಲ್ಲಿ ಕ್ರೀಡಾ ಕೂಟ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಎಸ್ಡಿಎಂಸಿ ಸಮನ್ವಯ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ ಮಾತನಾಡಿ ‘ಶಾಲೆಗಳಲ್ಲಿ ಶಿಕ್ಷಕರ ಮತ್ತು ದೈಹಿಕ ಶಿಕ್ಷಕರ ಕೊರತೆ ತೀವ್ರಗೊಂಡಿದೆ. ಆದುದರಿಂದ ಶಿಕ್ಷಕರ ಮತ್ತು ದೈಹಿಕ ಶಿಕ್ಷಕರ ನೇಮಕ ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಡಿಎಂಸಿ ಸಮನ್ವಯ ವೇದಿಕೆಯ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಎನ್.ಜಿ, ಪದಾಧಿಕಾರಿಗಳಾದ ರವೀಶ್ ಎಂ, ಪುಟ್ಟಣ್ಣ ಮಂಡೆಕೋಲು, ಜಯಾನಂದ ಪಟ್ಟೆ, ದಿನೇಶ್ ಹಾಲೆಮಜಲು, ಸುದರ್ಶನ ಪಾತಿಕಲ್ಲು, ದಯಾನಂದ ಕನ್ನಡ್ಕ, ಲೋಕೇಶ್ ತುಂಬತ್ತಾಜೆ, ವಿನ್ಯಾಸ್ ಕೊಚ್ಚಿ, ಮುರಳೀಧರ ರೈ ಉಪಸ್ಥಿತರಿದ್ದರು.














