ಮುಲ್ಲನಪುರ: ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡವು 50 ರನ್ಗಳಿಂದ ಜಯಿಸಿತು.ಸಂಜು ಸ್ಯಾಮ್ಸನ್ ನಾಯಕತ್ವದ ರಾಯಲ್ಸ್ ಸತತ ಎರಡನೇ ಗೆಲುವು ಸಾಧಿಸಿತು. ಶ್ರೇಯಸ್ ಅಯ್ಯರ್ ಬಳಗವು ಮೊದಲ ಸೋಲಿನ ಕಹಿಯುಂಡಿತು. ಯಶಸ್ವಿ ಜೈಸ್ವಾಲ್ (67; 45 ಎಸೆತ) ಮತ್ತು ನಾಯಕ ಸಂಜು ಸ್ಯಾಮ್ಸನ್ (38; 26ಎ) ಅವರು
ಮೊದಲ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 89 ರನ್ ಅಡಿಪಾಯದ ಮೇಲೆ ರಾಯಲ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 205 ರನ್ ಗಳಿಸಿತು. ಅದಕ್ಕುತ್ತರವಾಗಿ ಪಂಜಾಬ್ 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 155 ರನ್ ಗಳಿಸಿತು. ಇನಿಂಗ್ಸ್ನ ಮೊದಲ ಎಸೆತದಲ್ಲಿಯೇ ಪ್ರಿಯಾಂಶ್ ಆರ್ಯ ಮತ್ತು ಕೊನೆ ಎಸೆತದಲ್ಲಿ ಶ್ರೇಯಸ್ ಅಯ್ಯರ್ ಅವರ ಸ್ಟಂಪ್ ಎಗರಿಸುವಲ್ಲಿ ಜೋಫ್ರಾ ಸಫಲರಾದರು. ಈ ಸಂದರ್ಭದ ಲಾಭ ಪಡೆದ ಉಳಿದ ಬೌಲರ್ಗಳೂ ಹಿಡಿತ ಸಾಧಿಸಿದರು. ಇದರಿಂದ ಪಂಜಾಬ್ ಬ್ಯಾಟರ್ಗಳು ಒತ್ತಡಕ್ಕೊಳಗಾದರು. ಈ ನಡುವೆಯೂ ಐದನೇ ಕ್ರಮಾಂಕದ ನಿಹಾಲ್ ವಧೇರಾ (62; 41ಎ, 4X4, 6X3) ಮತ್ತು ಗ್ಲೆನ್ ಮ್ಯಾಕ್ಸ್ವೆಲ್ (30; 21ಎ) ಹೋರಾಟ ಮಾಡಿದರು. ಆದರೂ ತಂಡಕ್ಕೆ ಗೆಲುವು ದಕ್ಕಲಿಲ್ಲ.












