ಮಂಗಳೂರು: ಮಂಗಳೂರು ನಗರ ಹಾಗೂ ಜಿಲ್ಲೆಯ ವಿವಿಧ ಕಡೆಗಳಲ್ಲಿ ಜಂಕ್ಷನ್ ಹಾಗೂ ವೃತ್ತಗಳಲ್ಲಿ ಸುಗಮ ಸಂಚಾರಕ್ಕೆ ಸ್ಥಳೀಯ ನಗರ ಸಂಸ್ಥೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸೂಚಿಸಿದ್ದಾರೆ.ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯ ಹಲವು
ಜಂಕ್ಷನ್, ವೃತ್ತಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ ಪಾರ್ಕಿಂಗ್, ಒತ್ತುವರಿ, ಬೀದಿ ವ್ಯಾಪಾರದಿಂದ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಬಂದಿವೆ. ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡರೂ, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಗಮನಕ್ಕೆ ಬಂದಿರುತ್ತದೆ. ಈ ನಿಟ್ಟಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳು, ಆರ್.ಟಿ.ಓ, ಪೊಲೀಸ್ ಇಲಾಖೆಯೊಂದಿಗೆ ಜಂಟಿಯಾಗಿ ಪರಿಶೀಲಿಸಿ ಕೈಗೊಂಡು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಮಾತನಾಡಿ, ನಿರಂತರ ಅಪಘಾತಗಳಿಗೆ ಕಾರಣವಾಗುತ್ತಿರುವ ಪ್ರಮುಖ ಸ್ಥಳಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಮತ್ತು ಲೋಕೋಪಯೋಗಿ ಇಲಾಖೆ ವರದಿ ನೀಡಲಾಗಿದ್ದು, ಕೂಡಲೇ ಇಲ್ಲಿನ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪೊಲೀಸ್ ಇಲಾಖೆ ಹಾಗೂ ಆರ್.ಟಿ.ಓ.ಯಿಂದ ತಪಾಸಣೆ ನಡೆಸಿ, 2025ರಿಂದ 2026 ಏಪ್ರಿಲ್ 30ರವರೆಗೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ ಬಗ್ಗೆ 1855 ಪ್ರಕರಣಗಳು, ಶಾಲಾ ವಾಹನಗಳಲ್ಲಿ ಮಿತಿಮೀರಿ ಮಕ್ಕಳ ಸಾಗಿಸಿರುವ 99 ಪ್ರಕರಣಗಳು, ಟಿಂಟೆಡ್ ಗ್ಲಾಸ್ ಅಳವಡಿಸಿದ 12 ಪ್ರಕರಣಗಳು, ಕರ್ಕಶ ಹಾರ್ನ್ ವಿರುದ್ಧ 201 ಕೇಸ್ಗಳು ಹಾಗೂ ಮಿತಿಮೀರಿದ ಭಾರ ಸಾಗಿಸಿದ 184 ಪ್ರಕರಣಗಳನ್ನು ದಾಖಲಿಸಿ ದಂಡವ ವಸೂಲಿ ಮಾಡಲಾಗಿದೆ. ಅದೇ ರೀತಿ 2025 ರಿಂದ ಇದುವರೆಗೆ ಜಿಲ್ಲೆಯಲ್ಲಿ 433 ಮಾರಣಾಂತಿಕ ಅಪಘಾತ ಪ್ರಕರಣಗಳು ವರದಿಯಾಗಿದ್ದು, ಈ ಸಂಬಂಧ 384 ಡ್ರೈವಿಂಗ್ ಲೈಸೆನ್ಸ್ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಮಂಗಳೂರು ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವಿದ್ ಅಝ್ಮಿ, ಮಹಾನಗರಪಾಲಿಕೆ ಅಯುಕ್ತ ರವಿಚಂದ್ರ ನಾಯಕ್, ಲೋಕೋಪಯೋಗಿ ಇಲಾಖೆಯ ಕಾರ್ಯಕಾರಿ ಅಭಿಯಂತರಾದ ರಾಘವೇಂದ್ರ ನಾಯ್ಕ್ ಮತ್ತಿತರರು ಇದ್ದರು.













