ಮಂಗಳೂರು:ಮೈಸೂರಿನ ದಸರಾ ರಾಜವೈಭವದ ಪ್ರತೀಕವಾದರೆ, ಮಂಗಳೂರಿನ ದಸರಾ ಭಕ್ತವೈಭವದ ಪ್ರತೀಕ. ದಸರಾ ಕೇವಲ ಆಚರಣೆಯಲ್ಲ,ಅದು ನಮ್ಮ ಪರಂಪರೆಯ ಹೆಮ್ಮೆ, ಆರ್ಥಿಕ ಚಟುವಟಿಕೆಗಳ ಚೈತನ್ಯ ಮತ್ತು ಸಮಾಜದ ಒಗ್ಗಟ್ಟಿನ ಸಂಕೇತ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣ್ಣಿಸಿದರು.ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗುರುವಾರ ಮಂಗಳೂರು ದಸರಾ ಉದ್ಘಾಟಿಸಿ ಅವರು ಮಾತನಾಡಿದರು.ಕರಾವಳಿಯ
ಸಂಸ್ಕೃತಿ, ಧಾರ್ಮಿಕ ಪರಂಪರೆ, ಪ್ರಕೃತಿ ಮತ್ತು ಜನರ ಭಾವನೆಗಳನ್ನು ಗೌರವಿಸಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ಹೇಳಿದರು. ದೇವಸ್ಥಾನಗಳಲ್ಲಿ ಪಕ್ಷಭೇದಗಳಿಗೆ ಅವಕಾಶವಿಲ್ಲ. ಎಲ್ಲರೂ ಒಂದಾಗಿ ಸೇರುವ ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಒಗ್ಗಟ್ಟು ಮೂಡಿಸುತ್ತವೆ. ಪರಂಪರೆಯ ಜತೆಗೆ ಪ್ರಗತಿಯನ್ನೂ ಸಾಧಿಸಬೇಕು ಎಂದು ಅವರು ಹೇಳಿದರು.
ಸಿಎಂ ಡಿ ಕೆ ಶಿವಕುಮಾರ್ ಅವರು ಮಂಗಳೂರಿನ

ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಮಂಗಳೂರು ದಸರಾ ಅಂಗವಾಗಿ ಗೋಕರ್ಣನಾಥ ದೇವರಿಗೆ ಗುರುವಾರ ಪೂಜೆ ಸಲ್ಲಿಸಿದರು. ನಂತರ ಶಾರದ ದೇವಿ, ದುರ್ಗಾ ಮಾತೆಗೆ ನಮಿಸಿದರು. ಸಚಿವರಾದ ಯು ಟಿ ಖಾದರ್, ರಿಜ್ವಾನ್ ಅರ್ಷದ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಮಂಕಾಳ್ ವೈದ್ಯ, ವೇದವ್ಯಾಸ ಕಾಮತ್, ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಐವಾನ್ ಡಿಸೋಜ, ಮಾಜಿ ಸಚಿವ ರಮಾನಾಥ ರೈ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್ ಸೋಮಸುಂದರಂ, ಖಜಾಂಚಿ ಪದ್ಮರಾಜ್ ಪೂಜಾರಿ ಮತ್ತಿತರರು ಇದ್ದರು.










