*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಸುಳ್ಯದವರಾದ ಗುಜರಾತ್ನ ಉದ್ಯಮಿ ಪರಿಸರ ತಜ್ಞ ಗ್ರೀನ್ ಹೀರೋ ಆಪ್ ಇಂಡಿಯಾ ಡಾ.ಆರ್.ಕೆ.ನಾಯರ್ ಅವರು
32 ಲಕ್ಷಕ್ಕೂ ಅಧಿಕ ಗಿಡಗಳನ್ನು ಬೆಳೆಸುವ ಮೂಲಕ ದೇಶದ ಅರಣ್ಯವನ್ನು ಉಳಿಸುವ ಪ್ರಯತ್ನ ನಡೆಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಜಪಾನ್ನ ಮಿಯಾವಾಕಿ ಮಾದರಿಯಲ್ಲಿ ಅವರು ಬೆಳೆಸುತ್ತಿರುವ ಅರಣ್ಯಗಳಿಗೆ ಅವರು ‘ಭಾರತ ವನ’ ಎಂದು ಹೆಸರಿಸಿದ್ದಾರೆ. ಮಿಯಾವಾಕಿ ಪದ್ದತಿಯನ್ನು ಸಾಕಷ್ಟು ಬದಲಾವಣೆ ಮಾಡಿ ತನ್ನದೇ ಆದ ರೀತಿಯಲ್ಲಿ
ಅವರು ಬೆಳೆಸಿದ ವನಗಳು ಇನ್ನು ಮುಂದೆ ‘ಭಾರತ ವನ’ ಎಂದು ನಾಮಕರಣಗೊಳ್ಳಲಿದೆ.
ಜಪಾನ್ನ ಮಿಯಾವಾಕಿಯಂತೆ ಭಾರತದಲ್ಲಿ ಯಥಾವತ್ತಾಗಿ ಅರಣ್ಯ ಬೆಳೆಸುವುದು ಸಾಧ್ಯವಿಲ್ಲ. ಇಲ್ಲಿನ ಪರಿಸರಕ್ಕೆ ಪೂರಕವಾಗಿ ಇಲ್ಲಿನ ಸ್ಥಳೀಯ ಗಿಡಗಳನ್ನು ಆಯ್ಕೆ ಮಾಡಿ ಬೆಳೆಸಬೇಕು. ಭಾರತದಲ್ಲಿ ಬೆಳೆದ ಮಿಯಾವಾಕಿ ಮಾದರಿಯ ಅರಣ್ಯವನ್ನು ‘ಭಾರತ ವನ’ ಎಂಬುದಾಗಿ ಹೆಸರಿಸಿದ್ದೇನೆ ಎಂದು ಗುಜರಾತ್ನ ಸ್ಮೃತಿ ವನದ ರೂವಾರಿ ಡಾ.ಆರ್.ಕೆ. ನಾಯರ್ ಅವರು ಹೇಳಿದ್ದಾರೆ.
ಇಲ್ಲಿನ ಮಣ್ಣು, ಗಾಳಿ, ನೀರು, ಭೌಗೋಳಿಕ ವಾತಾವರಣಕ್ಕೆ ಅನುಸಾರವಾಗಿ ತನ್ನ ಅರಣ್ಯೀಕರಣದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದೇನೆ, ಅತೀ ಕಡಿಮೆ ಸ್ಥಳದಲ್ಲಿ ಅತೀ ಹೆಚ್ಚು ಅಂದರೆ ಗುಂಪಾಗಿ ಗಿಡ ಬೆಳೆಸುವುದು ಮಾತ್ರ ಮಿಯಾವಾಕಿ ಮಾದರಿಯನ್ನು ಹೋಲುತ್ತದೆ. ಉಳಿದಂತೆ ಭಾರತೀಯತೆ ಇದರಲ್ಲಿ ಅಳವಡಿಸಲಾಗಿದೆ ಎಂದು ಅವರು

ತನ್ನ ಭಾರತ ವನದಲ್ಲಿ ಡಾ.ಆರ್.ಕೆ.ನಾಯರ್
ಹೇಳಿದರು. 2011ರಲ್ಲಿ ತನ್ನ ಪರಿಸರ ಸಂರಕ್ಷಣಾ ಅಭಿಯಾನ ಆರಂಭಿಸಿದ ಡಾ.ನಾಯರ್ ಇದುವರೆಗೆ 12 ರಾಜ್ಯಗಳಲ್ಲಿ 122 ಹೊಸ ಕಾಡುಗಳನ್ನು ನಿರ್ಮಿಸಿದ್ದಾರೆ. 32 ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದಾರೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯ ಸ್ಮೃತಿ ವನವೂ ಸೇರಿದೆ. ಕಛ್ ಭೂಕಂಪದಲ್ಲಿ ಮಡಿದವರ ನೆನಪಿಗಾಗಿ ನಿರ್ಮಿಸಿದ ಸ್ಮೃತಿ ವನದಲ್ಲಿ 5.25 ಲಕ್ಷ ಗಿಡ ಬೆಳೆಸಲಾಗಿದೆ. ಮುಂದಿನ ವಾರ 50 ಸಾವಿರ ಗಿಡ ನೆಡಲಿದ್ದಾರೆ.ಮುಂದೆ ಅಲ್ಲಿ 12 ಲಕ್ಷ ಗಿಡ ನೆಡುವ ಗುರಿ ಇದೆ ಎನ್ನುತ್ತಾರೆ ಅವರು. ರಾಜಸ್ಥಾನದ ಮರುಭೂಮಿಯಲ್ಲಿಯೂ ಗಿಡ ಬೆಳೆಸುವ ಹಂಬಲ ಡಾ.ಆರ್.ಕೆ.ನಾಯರ್ ಅವರದ್ದು.ಮರುಭೂಮಿಯಲ್ಲಿ ಹಸಿರು ನಳ ನಳಿಸುವಂತೆ ಮಾಡುವ ಉದ್ದೇಶದಿಂದ ರಾಜಸ್ಥಾನದ ಕಲುಷಿತ ಮತ್ತು ಅತ್ಯಂತ ಒಣ ಪ್ರದೇಶವಾದ ಪಾಲಿಯಲ್ಲಿ ಡಾ.ಆರ್.ಕೆ.ನಾಯರ್ ನೇತೃತ್ವದಲ್ಲಿ ಒಂದು ಲಕ್ಷ ಗಿಡ ನೆಡುವ ಯೋಜನೆಗೆ ಚಾಲನೆ ನೀಡಲಾಗಿದೆ. ಪಾಲಿ ಪ್ರದೇಶದಲ್ಲಿ ಒಟ್ಟು 100 ಎಕ್ರೆ ಪ್ರದೇಶದಲ್ಲಿ 11 ಲಕ್ಷ ಗಿಡ ನೆಡುವ ಯೋಜನೆ ರೂಪಿಸಲಾಗಿದ್ದು ಪ್ರಥಮ ಹಂತದಲ್ಲಿ 10 ಎಕ್ರೆ ಸ್ಥಳದಲ್ಲಿ ಒಂದು ಲಕ್ಷ ಗಿಡಗಳನ್ನು ನೆಡಲಾಗುತ್ತದೆ. 2011 ರಲ್ಲಿ

ಗುಜರಾತ್ನಲ್ಲಿ ರಸ್ತೆ ವಿಸ್ತರಣೆಗೆ ಮರ ಕಡಿದಾಗ ಮರದಲ್ಲಿದ್ದ ಹಕ್ಕಿ ಗೂಡು ಬಿದ್ದು ಮೊಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದವು. ಹಕ್ಕಿಗಳ ಮರುಕ ಕಂಡ ಗಿಡ ನೆಟ್ಟು ಪೋಷಿಸಲು ನಿರ್ಧರಿಸಿದ್ದ ಡಾ.ರಾಧಾಕೃಷ್ಣನ್ ನಾಯರ್ ವಿವಿಧ ಕಡೆಗಳಲ್ಲಿ ಮರುಭೂಮಿಯಲ್ಲಿ, ಮುಳ್ಳಿನ ಗಿಡಗಳು ಮಾತ್ರ ಇದ್ದ ಕಛ್ನ ಭುಜಂಗ ಪರ್ವತದಲ್ಲಿ, ಸಮುದ್ರ ಬದಿಯಲ್ಲಿ, ಮರಳು ಮಾತ್ರ ಇರುವ ಪ್ರದೇಶದಲ್ಲಿ, ಕೈಗಾರಿಕಾ ಪ್ರದೇಶದಲ್ಲಿ ಹೀಗೆ ಕಳೆದ ಒಂದೂವರೆ ದಶಕಗಳಿಂದ ದೇಶದಾದ್ಯಂತ ಹಸಿರು ಪರಿಸರ ಸೃಷ್ಟಿಸುತ್ತಿರುವವರು ಸುಳ್ಯ ಜಾಲ್ಸೂರಿನವರಾದ ಡಾ.ಆರ್.ಕೆ.ನಾಯರ್. ಅವರು 122 ಕಾಡುಗಳನ್ನು ಸೃಷ್ಠಿಸಿ 32 ಲಕ್ಷಕ್ಕೂ ಅಧಿಕ ಮರ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಒಂದು ಕೋಟಿ ಗಿಡ ನೆಡುವುದು ಅವರ ಗುರಿ. ಅವರ

ವನದಲ್ಲಿ ಪಕ್ಷಿಗಳು, ಪ್ರಾಣಿಗಳು ಮತ್ತೆ ಕಲರವ ಆರಂಭಿಸಿ ಆವಾಸ ವ್ಯವಸ್ಥೆ ಸುದೃಢವಾಗಿದೆ. ಹಸಿರು ನಳ ನಳಿಸುವ ಕನಸಿನ ಭಾರತ ನಿರ್ಮಾಣ ಅವರ ಕನಸು.
‘ಸುಳ್ಯದಲ್ಲಿಯೂ ಭಾರತ ವನ’
ವಿವಿಧ ರಾಜ್ಯಗಳಲ್ಲಿ ಭಾರತ ವನ ನಿರ್ಮಿಸಿದರ ಜೊತೆಗೆ ತನ್ನ ಹುಟ್ಟೂರಿನಲ್ಲಿ ಒಂದು ಸುಂದರ ಭಾರತ ವನ ನಿರ್ಮಾಣ ಮಾಡಬೇಕು ಎನ್ನುವುದು ಆರ್.ಕೆ.ನಾಯರ್ ಅವರ ಬಯಕೆ. ಈ ಹಿನ್ನಲೆಯಲ್ಲಿ ಅವರು ಕಳೆದ ಒಂದೂವರೆ ವರ್ಷದಿಂದ ಕಾರ್ಯ ಪ್ರವೃತ್ತರಾಗಿದ್ದಾರೆ. ಅದಕ್ಕಾಗಿನ ಪ್ರಯತ್ನಗಳು ಮುಂದುವರಿದಿದೆ. ಆರಂಭಿಕ ಹಂತದಲ್ಲಿ ಸುಮಾರು 10 ಸಾವಿರ ಗಿಡಗಳ ಒಂದು ವನ ನಿರ್ಮಿಸುವ ಯೋಚನೆ ಇದೆ ಎನ್ನುತ್ತಾರೆ ಅವರು.