ಸುಳ್ಯ: ಲೋಕಸಭಾ ಚುನಾವಣೆಯ ಫಲಿತಾಂಶವು ಪ್ರಜಾಪ್ರಭುತ್ವ ವಿಶ್ವಾಸಿಗಳಿಗೆ ಆಶಾದಾಯಕವಾಗಿ ಮೂಡಿ ಬಂದಿದೆ ಎಂದು ರಾಷ್ಟ್ರ ರಕ್ಷಾ ವೇದಿಕೆ ಹೇಳಿದೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರ ರಕ್ಷಾವೇದಿಕೆಯ ಅಧ್ಯಕ್ಷ ಲಕ್ಷ್ಮೀಶ ಗಬ್ಬಲಡ್ಕ ಜಾತ್ಯಾತೀತ ಶಕ್ತಿಗಳಿಗೆ ನಿರೀಕ್ಷೆ ಹುಟ್ಟಿಸಿದ ಚುನಾವಣೆ ಇದಾಗಿದೆ ಎಂದರು. ಚುನಾವಣಾ ಫಲಿತಾಂಶವನ್ನು
ಸಮಗ್ರವಾಗಿ ವಿಶ್ಲೇಷಣೆ ಮಾಡುವ ಸಂದರ್ಭದಲ್ಲಿ ಬಡವರಿಗೆ, ಪ್ರಜಾಪ್ರಭುತ್ವ ವಿಶ್ವಾಸಿಗಳಿಗೆ, ಜಾತ್ಯಾತೀತ ಮನಸ್ಸುಗಳಿಗೆ ಆಶಾದಾಯಕವಾಗಿ ಮೂಡಿ ಬಂದಿರುತ್ತದೆ. ಇದು ರಾಷ್ಟ್ರದ ಜನತೆ ಎಲ್ಲರಿಗೂ ನೀಡಿದ ಸಂದೇಶ ಮತ್ತು ಜನವಿರೋಧಿ ಆಡಳಿತಕ್ಕೆ ನೀಡಿದ ಎಚ್ಚರಿಕೆಯಾಗಿದೆ ಎಂದರು. 2019ರ ಚುನಾವಣೆಯನ್ನು ತುಲನೆ ಮಾಡಿದಾದ ಸುಳ್ಯದಲ್ಲಿ ಸುಮಾರು 8 ರಿಂದ 9 ಸಾವಿರ ಮತಗಳು ಕಾಂಗ್ರೆಸ್ಸಿಗೆ ಹೆಚ್ಚಾಗಿ ಬಂದಿರುತ್ತದೆ ಎಂದು ಅವರು ಹೇಳಿದರು.ಅದರಂತೆ ದ.ಕ.ಲೋಕಸಭಾ ಕ್ಷೇತ್ರದಲ್ಲಿ 2019ರಲ್ಲಿ ಕಾಂಗ್ರೆಸ್ಗೆ 37.14 ಇದ್ದ ಮತಗಳು ಈ ಬಾರಿ ಶೇ. 43.43 ಹೆಚ್ಚಳ ಆಗಿದೆ ಎಂದು ವಿಶ್ಲೇಷಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರ ರಕ್ಷಾ ವೇದಿಕೆಯ ಪದಾಧಿಕಾರಿಗಳಾದ ಕೆ.ಎಸ್.ಉಮ್ಮರ್, ಕೆ.ಪಿ.ಜಾನಿ ಮಾತನಾಡಿದರು. ವಸಂತ ಗೌಡ ಪೆಲ್ತಡ್ಕ, ಅಶ್ರಫ್ ಎಲಿಮಲೆ, ಅಚ್ಚುತ ಗುತ್ತಿಗಾರು ಉಪಸ್ಥಿತರಿದ್ದರು.