ಸುಳ್ಯ:ವಿದ್ಯಾರ್ಥಿಗಳು ಓದುವ ವಿಷಯದ ಗಮನ ಹರಿಸಬೇಕು. ಮೊದಲಾಗಿ, ಕಲಿಕೆಯಲ್ಲಿ ಕಷ್ಟದ ವಿಷಯವನ್ನು ಇಷ್ಟ ಪಟ್ಟು ಓದಿದರೆ ಮಾತ್ರ ಪರೀಕ್ಷೆಗೆ ಗಮನ ಹರಿಸಲು ಸಾಧ್ಯ. ಇದರಲ್ಲಿ ಪೋಷಕರ ಪಾತ್ರವೂ ಅಷ್ಟೇ ಮುಖ್ಯ. ಇತ್ತೀಚಿನ ಕಾಲದಲ್ಲಿ ಮೊಬೈಲ್, ಸಾಮಾಜಿಕ ಜಾಲತಾಣಕ್ಕೆ ತೋರಿಸುವ ಆಸಕ್ತಿಯನ್ನು ಮಕ್ಕಳ ಮೇಲೆ, ಮಕ್ಕಳ ಓದಿನ ಮೇಲೆ ತೋರಿಸಬೇಕು. ಅಲ್ಲದೇ
ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳಾದ ಕಲೆ, ಸಾಹಿತ್ಯಗಳ ಮೇಲೂ ಆಸಕ್ತಿ ವಹಿಸಬೇಕು ಎಂದು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ಪಿ. ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದಲ್ಲಿ ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾಹಿತಿ, ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಸುಳ್ಯ ರೋಟರಿ ಫ್ರೌಡ ಶಾಲಾ ಮುಖ್ಯ ಶಿಕ್ಷಕಿ ವೀಣಾ ಶೇಡಿಕಜೆ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಯ ಬಗ್ಗೆ ಮಾಹಿತಿ ನೀಡಿದರು. ರಂಗಮಯೂರಿ ಕಲಾಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು.ವೇದಿಕೆಯಲ್ಲಿ ಸುಗಮ ಸಂಗೀತ ಶಿಕ್ಷಕಿ ಸುಮನಾ ರಾವ್, ಪೋಷಕ ಸಮಿತಿಯ ಯಶ್ವಿತ್ ಕಾಳಮ್ಮನೆ, ಸೌಮ್ಯ ಆಲಂಕಲ್ಯ, ಸುನಂದ ಶೆಟ್ಟಿ ವಿದ್ಯಾರ್ಥಿಗಳು ಹಾಗೂ ಪೋಷಕವೃಂದ ಉಪಸ್ಥಿತರಿದ್ದರು. ಡ್ಯಾನ್ಸ್ ಶಿಕ್ಷಕ ವಿನೋದ್ ಕರ್ಕೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯತ್ರಿ ಸ್ವಾಗತಿಸಿದರು.ರಂಗಮಯೂರಿ ಕಲಾಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ವಂದಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರ್ವಹಿಸಿದರು.