ಸುಳ್ಯ: ಸುಳ್ಯದಲ್ಲಿ ಮಾ.25ರಂದು ಗುಡುಗು ಸಹೀತ ಮಳೆಯಾಗಿದೆ. ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆ ಸುರಿದಿದೆ. ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇದ್ದು ಸಂಜೆ 5 ಗಂಟೆಯ ವೇಳೆಗೆ ಮಳೆ ಸುರಿದಿದೆ. ಗುಡುಗು ಸಿಡಿಲಿನ ಅಬ್ಬರದೊಂದಿಗೆ ಸುಮಾರು ಅರ್ಧ ಗಂಟೆಗಳಿಗೂ
ಹೆಚ್ಚು ಕಾಲ ಉತ್ತಮ ಮಳೆ ಸುರಿದಿದೆ. ಸುಳ್ಯ, ನಗರ, ಅರಂತೋಡು, ತೊಡಿಕಾನ ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಸುಳ್ಯದಲ್ಲಿ ಕೆಲವೆಡೆ ಆಲಿಕಲ್ಲು ಮಳೆಯಾಗಿದೆ. ಕೆಲವೆಡೆ ಗಾಳಿಯೂ ಬೀಸಿದೆ. ಕಳೆದ ಕೆಲವು ದಿನಗಳಿಂದ ಉರಿ ಬಿಸಿಲಿನ ಮತ್ತು ವಿಪರೀತ ಸೆಕೆಯ ವಾತಾವರಣ ಇತ್ತು. ಇದೀಗ ಉತ್ತಮ ಮಳೆಯಾಗಿರುವುದರಿಂದ ಇಳೆಗೆ ತಂಪೆರೆದಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.ಕಳೆದ ಮೂರು ದಿನಗಳಿಂದ ರಾಜ್ಯದ ವಿವಿಧ ಭಾಗದಲ್ಲಿ ಮಳೆ ಸುರಿಯುತ್ತಿದ್ದು ಸುಳ್ಯದಲ್ಲಿ ಭರ್ಜರಿ ಮಳೆಯಾಗಿದೆ.ಕಳೆದ ಕೆಲವು ದಿನಗಳಿಂದ ಭಾರೀ ಸೆಕೆ, ಏರಿದ ಉಷ್ಣಾಂಶ ಇತ್ತು. ಇದರಿಂದ ಕೆಲವೆಡೆ ನೀರಿನ ಲಭ್ಯತೆಯೂ ಕಡಿಮೆಯಾಗಿದೆ.ಇದೀಗ ಉತ್ತಮ ಮಳೆಯಾಗಿರುವ ಕಾರಣ ತಂಪಿನ ವಾತಾವರಣ ಉಂಟಾಗಿದೆ.