ಪುತ್ತೂರು: ಇತಿಹಾಸ ಪ್ರಸಿದ್ದ ಮಹತೋಭಾರ ಪುತ್ತೂರು ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವವು ಗುರುವಾರ ರಾತ್ರಿ ಭಕ್ತಿ ಸಂಭ್ರಮದೊದಿಗೆ ವೈಭವಯುತವಾಗಿ ನಡೆಯಿತು. ಲಕ್ಷಾಂತರ ಮಂದಿ ಭಕ್ತರು ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡರು. `ಪುತ್ತೂರು ಬೆಡಿ’ ಎಂದೇ ಪ್ರಖ್ಯಾತಿ ಪಡೆದಿರುವ ಸುಡುಮದ್ದು ಪ್ರದರ್ಶನವು ಬಾನಂಗಳದಲ್ಲಿ ವರ್ಣ ಚಿತ್ತಾರ ಮೂಡಿಸಿತ್ತು. ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಲಕ್ಷಾಂತರ ಕಣ್ಣುಗಳಿಗೆ
ರಸದೌತಣ ನೀಡಿತು.ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆದ ಬ್ರಹ್ಮರಥೋತ್ಸವದಲ್ಲಿ ಆರಂಭದಲ್ಲಿ ಬ್ರಹ್ಮರಥ ಸೇವೆ ನೀಡಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.ಏ.17ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ಉತ್ಸವ, ಕಟ್ಟೆಪೂಜೆ, ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಸಂಜೆ ದೇವರ ಮತ್ತು ಉಳ್ಳಾಲ್ತಿ ಅಮ್ಮನವರ ಉತ್ಸವ ನಡೆಯಿತು. ಬಳಿಕ ಬ್ರಹ್ಮರಥದ ಬಳಿ ಕಾಜುಕುಜುಂಬ ದೈವದ ನುಡಿಗಟ್ಟು

ನಡೆದು ದೇವರು ರಥಾರೂಢರಾದರು. ಬಳಿಕ ಪುತ್ತೂರು ಬೆಡಿ ಆರಂಭಗೊಂಡಿತು. ಸುಮಾರು 1 ಗಂಟೆ ಕಾಲ ಸುಡುಮದ್ದು ಪ್ರದರ್ಶನ ನಡೆದು ರಾತ್ರಿ ವೇಳೆ ಬ್ರಹ್ಮರಥೋತ್ಸವ ನಡೆಯಿತು. ಬಳಿಕ ಬ್ರಹ್ಮರಥದಿಂದ ಇಳಿದ ದೇವರು ಬಂಗಾರ್ ಕಾಯರ್ಕಟ್ಟೆ ಸವಾರಿಯ ಬಳಿಕ ಅಂಕೆತ್ತಿಮಾರ್ ಕಟ್ಟೆಯಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ ದಂಡ ನಾಯಕ ಉಳ್ಳಾಲ್ತಿ ದೈವಗಳ ಭಂಡಾರ ಬೀಳ್ಕೊಡುಗೆಯ ಬಳಿಕ ದೇವಳದ ಒಳಗೆ ಪ್ರವೇಶ, ಶಯನ ನಡೆಯಿತು.
ಜಾತ್ರೋತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಹಲವು ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಣ್ಗಾವಲು ನಡೆಸಲಾಗಿತ್ತು. ಪುತ್ತೂರು ಕೆಎಸ್ಸಾರ್ಟಿಸಿ ವತಿಯಿಂದ ಬ್ರಹ್ಮರಥೋತ್ಸವದ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚುವರಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
