ಬೆಂಗಳೂರು: ತನ್ನ ಹೋಂ ಗ್ರೌಂಡಾದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ ಮೊದಲ ಎರಡೂ ಪಂದ್ಯಗಳಲ್ಲಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ತನ್ನ ಮನೆಯಂಗಳದಲ್ಲೂ ಗೆಲುವು ಸಾಧಿಸುವ ಹಂಬಲದಲ್ಲಿದೆ. ಐಪಿಎಲ್ 18ನೇ ಆವೃತ್ತಿಯಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಆರ್ಸಿಬಿಗೆ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.ತವರಿನಾಚೆ ಆಡಿದ 4 ಪಂದ್ಯಗಳಲ್ಲೂ
ಗೆದ್ದಿದ್ದರೂ,ರಜತ್ ಪಾಟೀದಾರ್ ಪಡೆ ಟೂರ್ನಿಯಲ್ಲಿ 5ನೇ ಜಯದ ತವಕದಲ್ಲಿದೆ.ಆರ್ಸಿಬಿ ತಂಡ ತವರಿನಲ್ಲಿ ಆಡಿದ ಮೊದಲೆರಡೂ ಪಂದ್ಯಗಳಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದಿತ್ತು ಮತ್ತು ಬ್ಯಾಟಿಂಗ್ ವಿಭಾಗದ ಕುಸಿತದಿಂದಾಗಿ ಸ್ಪರ್ಧಾತ್ಮಕ ಮೊತ್ತಕ್ಕೆ ತೃಪ್ತಿಪಟ್ಟಿತ್ತು.
ಆರ್ಸಿಬಿ, ಪಂಜಾಬ್ ತಂಡಗಳು ಇದುವರೆಗೆ ಆಡಿದ 6 ಪಂದ್ಯಗಳಲ್ಲಿ ತಲಾ 4 ಜಯ, 2 ಸೋಲಿನೊಂದಿಗೆ 8 ಅಂಕ ಕಲೆಹಾಕಿವೆ. ರನ್ರೇಟ್ ಲೆಕ್ಕಾಚಾರದಲ್ಲಿ ಆರ್ಸಿಬಿ ತುಸು ಮೇಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವೂ ಒಲಿಯಬಹುದು.
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್, ಜಿತೇಶ್ ಶರ್ಮ, ಟಿಮ್ ಡೇವಿಡ್ರಂಥ ಬ್ಯಾಟರ್ಗಳಿಂದ ಕೂಡಿರುವ ಆರ್ಸಿಬಿ ತಂಡಕ್ಕೆ ಎದುರಾಳಿ ತಂಡದ ಬ್ಯಾಟರ್ಗಳಿಂದಲೂ ನಿಕಟ ಪ್ರತಿಸ್ಪರ್ಧೆ ಎದುರಾಗುವ ನಿರೀಕ್ಷೆಯಿದೆ. ಪ್ರಿಯಾಂಶ್ ಆರ್ಯ, ಪ್ರಭ್ಸಿಮ್ರನ್, ಶ್ರೇಯಸ್ ಅಯ್ಯರ್, ನೇಹಲ್ ವಧೇರ, ಶಶಾಂಕ್ ಸಿಂಗ್, ಮ್ಯಾಕ್ಸ್ವೆಲ್, ಸ್ಟೋಯಿನಿಸ್ರಂಥ ಬ್ಯಾಟರ್ಗಳು ಪಂಜಾಬ್ ತಂಡದಲ್ಲಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲೂ ಉಭಯ ತಂಡಗಳು ಸಮಬಲ ಹೊಂದಿದ್ದು, ಆರ್ಸಿಬಿಗೆ ಭುವನೇಶ್ವರ್, ಹ್ಯಾಸಲ್ವುಡ್, ಯಶ್ ದಯಾಳ್ ಬಲ ತುಂಬಿದ್ದರೆ, ಪಂಜಾಬ್ಗೆ ಅರ್ಷದೀಪ್, ಮಾಕೋ ಜಾನ್ಸೆನ್ ಪ್ರಮುಖ ಅಸ್ತ್ರವೆನಿಸಿದ್ದಾರೆ. ಸ್ಪಿನ್ನರ್ ಯಜುವೇಂದ್ರ ಚಾಹಲ್, ಆಡಿದ ಮೊದಲ 5 ಪಂದ್ಯಗಳಲ್ಲಿ ಎರಡೇ ವಿಕೆಟ್ ಕಬಳಿಸಿದ್ದರು. ಆದರೆ ಕಳೆದ ಪಂದ್ಯದಲ್ಲಿ ಕೆಕೆಆರ್ ಎದುರು 4 ವಿಕೆಟ್ ಕಬಳಿಸುವ ಮೂಲಕ ಪಂಜಾಬ್ ತಂಡದ ಅಚ್ಚರಿಯ ಗೆಲುವಿನ ರೂವಾರಿ ಎನಿಸಿದ್ದರು. ಚಾಹಲ್ ಲಯಕ್ಕೆ ಮರಳಿರುವುದು ಈಗ ಆರ್ಸಿಬಿ ಬ್ಯಾಟರ್ಗಳಿಗೆ ಹೆಚ್ಚಿನ ಸವಾಲು ಒಡ್ಡಲಿದೆ.