ಪುತ್ತೂರು:ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಶುಕ್ರವಾರ ರಾತ್ರಿ ಬ್ರಹ್ಮ ರಥೋತ್ಸವವು ಕಿಕ್ಕಿರಿದು ಸೇರಿದ್ದ ಭಕ್ತಸ್ತೋಮದ ಮಧ್ಯೆ ವೈಭವಯುತವಾಗಿ ನಡೆಯಿತು. ಈ ವೇಳೆ ಹಲವು ನಿಮಿಷಗಳ ಕಾಲ ‘ಪುತ್ತೂರು ಬೆಡಿ’ ಖ್ಯಾತಿಯ ಸುಡುಮದ್ದು ಪ್ರದರ್ಶನ ಮನಸೂರೆಗೊಂಡಿತು.ಪುತ್ತೂರು ಬೆಡಿ ಮತ್ತು
ಬ್ರಹ್ಮರಥೋತ್ಸವದ ಅಂಗವಾಗಿ ಶುಕ್ರವಾರ ಸಂಜೆಯಿಂದಲೇ ಭಾರೀ ಸಂಖ್ಯೆಯಲ್ಲು ಭಕ್ತರು ಆಗಮಿಸಿದ್ದರು.ರಾತ್ರಿ ಉತ್ಸವ ಬಲಿ ನಡೆಯಿತು. ಹೊರಾಂಗಣದಲ್ಲಿ ಉತ್ಸವ ಬಲಿ ನಡೆದ ಬಳಿಕ ವಿದ್ಯುತ್ ದೀಪ, ಹೂವಿನಿಂದ ಅಲಂಕೃತಗೊಂಡ ಬ್ರಹ್ಮರಥದ ಬಳಿಗೆ ದೇವರು ಆಗಮಿಸಿದರು. ಬಳಿಕ ಪ್ರಾರ್ಥನೆ, ದೈವದಿಂದ ದೇವರ ಭೇಟಿ, ದೈವದ ಅಭಯ ನುಡಿಯ ಬಳಿಕ

ರಾತ್ರಿ ದೇವರು ರಥಾರೂಢರಾದರು.
ಕುಂಟಾರು ರವೀಶ ತಂತ್ರಿ ಅವರಿಂದ ಬ್ರಹ್ಮರಥದಲ್ಲಿ ದೇವರಿಗೆ ಪೂಜೆ ನಡೆಯಿತು. ರಥದಲ್ಲಿ ದೇವರಿಗೆ ಪೂಜೆ ನಡೆದ ಬಳಿಕ ಪುತ್ತೂರು ಬೆಡಿ ಆರಂಭಗೊಂಡಿತು.ಭಕ್ತರಿಂದಲೇ ಸೇವಾ ರೂಪದಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ದೇವಳದ ರಥಬೀದಿಯಲ್ಲಿ ವೈಭವದ ಬ್ರಹ್ಮರಥೋತ್ಸವ ನಡೆಯಿತು.
ಪೊಲೀಸ್ ಇಲಾಖೆ ಯವರು ಜಾತ್ರಾಗದ್ದೆ ಮತ್ತು ಪುತ್ತೂರು ನಗರದಲ್ಲಿ ಬಿಗು ಬಂದೋಬಸ್ತ್ ಮಾಡಿದ್ದರು. ಜಾತ್ರಾ ಗದ್ದೆ ಹಾಗೂ ಪುತ್ತೂರು ನಗರ ಮತ್ತು ಆಸುಪಾಸಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು.
ನಗರದಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಿ ಹಾಗೂ ಬೇರೆ ಕಡೆಗಳಿಂದ ಬರುವ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳ ಸೂಚಿಸಲಾಗಿತ್ತು. ಜಾತ್ರೆಗೆ ಬರುವ ಭಕ್ತರಿಗೆ ಕೆಎಸ್ಆರ್ಟಿಸಿಯಿಂದ ವಿವಿಧ ಕಡೆಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿತ್ತು.
















