ಸುಳ್ಯ:ಸುಳ್ಯದ ಕಾರಣಿಕ ಕ್ಷೇತ್ರ ಶ್ರೀ ಕಲ್ಕುಡ ದೈವಸ್ಥಾನದಲ್ಲಿ
ಪುನರ್ ಪ್ರತಿಷ್ಠಾ ಕಲಶೋತ್ಸವ ಜೂ.15 ರಿಂದ 18ರ ನಡೆಯಲಿದೆ.ನವೀಕೃತ ಶಿಲಾಮಯ ಗುಡಿಯಲ್ಲಿ ಶ್ರೀ ಕಲ್ಕುಡ, ಕಲ್ಲುರ್ಟಿ ಹಾಗು ಗುಳಿಗ ದೈವದ ಕಟ್ಟೆಯಲ್ಲಿ ಪುನರ್ ಪ್ರತಿಷ್ಠಾ ಕಲಶೋತ್ಸವ ವಿವಿಧ ವೈದಿಕ ಹಾಗು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದರ ಅಂಗವಾಗಿ ಜೂ.15ರಂದು ಬೆಳಿಗ್ಗಿನಿಂದ
ದಶಮ ಸ್ಕಂದ ಪಾರಾಯಣವೂ ನಾರಾಯಣ ಮೂರ್ತಿ ಕಾಂಞಂಗಾಡ್ ಮತ್ತು ಬಾಲಕೃಷ್ಣ ನಂಬೂದಿರಿ ಅವರ ನೇತೃತ್ವದಲ್ಲಿ ಪ್ರಾರಂಭಗೊಂಡಿದೆ. ಸಂಜೆ ಗಂಟೆ 5ಕ್ಕೆ ತಂತ್ರಿಗಳ ಆಗಮನವಾಗುತ್ತದೆ. 6ರಿಂದ ವೈದಿಕ ಕಾರ್ಯಕ್ರಮಗಳು ನಡೆಯಲಿದೆ.ಜೂನ್ 16 ರಂದು ಬೆಳಿಗ್ಗೆ 7ರಿಂದ ಗಣಪತಿ ಹೋಮದಿಂದ ವೈದಿಕ ಕಾರ್ಯಕ್ರಮಗಳು ಪ್ರಾರಂಭಗೊಂಡು ತದನಂತರ ಭಾಗವತದಶಮ ಸ್ಕಂದ ಪಾರಾಯಣ ಮುಂದುವರೆದು ಪೂರ್ವಾಹ್ನ ಗಂಟೆ 10ಕ್ಕೆ ಮುಕ್ತಾಯಗೊಳ್ಳಲಿದೆ.
ಜೂನ್ 17ರ ಸಂಜೆ ಗಂಟೆ 4.30ರಿಂದ ಭಜನೆಯಿಂದ ಪ್ರಾರಂಭಗೊಂಡು ಗಂಟೆ 6ರ ನಂತರ ವಿವಿಧ ಹೋಮ ಹವನಗಳು ನಡೆಯಲಿದೆ.
ಜೂನ್ 18 ರಂದು ಪುನರ್ ಪ್ರತಿಷ್ಠಾ ಕಲಶಾಭಿಷೇಕ ನಡೆಯಲಿದೆ. ಪೂ. 8ಕ್ಕೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಬೆಳಿಗ್ಗೆ ಗಂಟೆ 8.08 ರಿಂದ 9.06ರ ಕರ್ಕಾಟಕ ಲಗ್ನದ ಶುಭ ಮುಹೂರ್ತದಲ್ಲಿ
ಶ್ರೀ ಕಲ್ಕುಡ, ಕಲ್ಲುರ್ಟಿ, ಗುಳಿಗ ದೈವಗಳಿಗೆ ಪುನರ್ ಪ್ರತಿಷ್ಠಾ ಕಲಶಾಭಿಷೇಕ ನಡೆಯಲಿದೆ. ಬಳಿಕ ದೈವಗಳಿಗೆ ತಂಬಿಲ, ಮಹಾಪೂಜೆ, ನಿತ್ಯ ನೈಮಿತ್ಯಾದಿಗಳ ನಿರ್ಣಯ ಆಗಿ ಪ್ರಸಾದ ವಿತರಣೆಯಾಗುತ್ತದೆ.
ಅಂದು ಪೂ.10.30ರಿಂದ ಧಾರ್ಮಿಕ ಸಭೆಯನ್ನು ಏರ್ಪಡಿಸಿದ್ದು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಮಹಾ ಸ್ವಾಮೀಜಿಗಳವರು ಆಶೀರ್ವಚನ ನೀಡಲಿದ್ದಾರೆ. ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ವೇ. ಮೂ.ದೇಲಂಪಾಡಿ ಗಣೇಶ ತಂತ್ರಿಯವರು ಗೌರವ ಉಪಸ್ಥಿತಿಯಲ್ಲಿ ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ. ಕೆ. ವಿ. ಚಿದಾನಂದ, ಶ್ರೀ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಆಡಳಿತ ಮೊಕೇಸರರಾದ ಡಾ. ಹರಪ್ರಸಾದ್ ತುದಿಯಡ್ಕ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀ ಪಿ. ಕೆ. ಉಮೇಶರವರು ಭಾಗವಹಿಸಲಿದ್ದಾರೆ.
ದೈವಸ್ಥಾನದ ಮರದ ಮಾಡಿನ ಕೆಲಸ, ತಾಮ್ರದ ಹೊದಿಕೆ, ಗ್ರಾನೆಟ್ ಕಲ್ಲು ಹಾಸು, ಗುಳಿಗನ ಕಟ್ಟೆ, ಅಯ್ಯಂಗಾಯಿಕಟ್ಟೆ, ಹೀಗೆ ಸುಮಾರು ರೂ.75 ಲಕ್ಷಗಳ ಕಾಮಗಾರಿಗಳು ಆಗಿವೆ. ದಾನಿಗಳ ಹಾಗು ಭಕ್ತರು ನೀಡುವ ದೇಣಿಗೆಯಲ್ಲಿ ಕಾಮಗಾರಿಗಳನ್ನು ನಡೆಸಲಾಗಿದೆ
ಎಂದು ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಹಾಗು ಆಡಳಿತ ಧರ್ಮದರ್ಶಿ ಪಿ.ಕೆ.ಉಮೇಶ್ ತಿಳಿಸಿದ್ದಾರೆ.








