ಧರ್ಮಸ್ಥಳ:ಜ್ಞಾನ ದಾಸೋಹದಿಂದ ಆತ್ಮನ ಸಾಕ್ಷಾತ್ಕಾರವಾಗಿ ಭಗವಂತನ ಸಾನ್ನಿಧ್ಯದೊಂದಿಗೆ ಶಾಶ್ವತ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಕನ್ಯಾಡಿ ರಾಮಕ್ಷೇತ್ರದ ಪೀಠಾಧಿಪತಿಗಳಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.ಅವರು ಗುರುವಾರ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ 55ನೇ ವರ್ಷದ
ಪುರಾಣ-ಕಾವ್ಯ ವಾಚನ-ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪುರಾಣ ಕಾವ್ಯ ವಾಚನ- ಪ್ರವಚನ ಅಮೂಲ್ಯ ಜ್ಞಾನಸತ್ರವಾಗಿದ್ದು, ಶ್ರೋತೃಗಳು ಆಧ್ಯಾತ್ಮದಲ್ಲಿ ತೊಡಗಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಸಮಯ ಅಮೂಲ್ಯವಾಗಿದ್ದು ಅದರ ಸದುಪಯೋಗ ಮಾಡಬೇಕು. ಎಲ್ಲರಿಗೂ ಕಾಲಪ್ರಜ್ಞೆ ಇರಬೇಕು. ಧರ್ಮದ ಮರ್ಮವನ್ನರಿತು ಅನುಷ್ಠಾನ ಮಾಡಿದರೆ ಜೀವನ ಪಾವನವಾಗುತ್ತದೆ. ಧರ್ಮದಿಂದ ವಿಮುಖರಾದರೆ ಸರ್ವನಾಶವಾಗುತ್ತದೆ. ಪುರಾಣ ಕಾವ್ಯ ವಾಚನ-ಪ್ರವಚನದ ಮೂಲಕ ಸಮಯದ ಸದ್ವಿನಿಯೋಗ ಮಾಡಿಕೊಳ್ಳಿ ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಧನ್ಯವಾದವಿತ್ತರು.








