ಮಂಗಳೂರು:ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ಸಂತ್ರಸ್ತರ ಪ್ರಾಣ ಉಳಿಸುವುದಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪಿಎಂ ರಾಹತ್ʼ ಯೋಜನೆಯನ್ನು ದಕ್ಷಿಣ ಕನ್ನಡದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವುದಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳ ಜತೆಗೆ ಸಭೆ ನಡೆಸಿದ ಅವರು ಪಿಎಂ ರಾಹತ್ (ರಸ್ತೆ ಅಪಘಾತ ಸಂತ್ರಸ್ತರ ಆಸ್ಪತ್ರೆಗೆ ದಾಖಲು ಮತ್ತು ಖಚಿತ ಚಿಕಿತ್ಸೆ) ಯೋಜನೆಯ
ಸಮರ್ಪಕ ಅನುಷ್ಠಾನಕ್ಕೆ ಸೂಚಿಸಿದರು. ಶಾಸಕ ವೇದವ್ಯಾಸ್ ಕಾಮತ್, ಜಿಲ್ಲೆಯ ಪ್ರಮುಖ ಆಸ್ಪತ್ರೆಗಳ ಪ್ರತಿನಿಧಿಗಳು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ತಿಮ್ಮಯ್ಯ ಹಾಗೂ ಡಿ.ಸಿ.ಪಿ ರವಿಶಂಕರ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ
ಅವರು, ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿ ಅವರ ಪ್ರಾಣ ರಕ್ಷಿಸುವಲ್ಲಿ ಪಿಎಂ ರಾಹತ್ ಅತ್ಯಂತ ಅವಶ್ಯಕ ಯೋಜನೆಯಾಗಿದೆ. ‘ಪಿಎಂ ರಾಹತ್’ ಯೋಜನೆಯಡಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಯಾವುದೇ ದಾಖಲೆಗಳ ತೊಡಕಿಲ್ಲದೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 7 ದಿನಗಳವರೆಗೆ ಗರಿಷ್ಠ 1.50 ಲಕ್ಷ ರೂಪಾಯಿ ತನಕ ಉಚಿತ ತುರ್ತು ಚಿಕಿತ್ಸೆ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಯೋಜನೆ ಸೌಲಭ್ಯ ವಿಳಂಬವಿಲ್ಲದೆ ಸಿಗಲು ಆಸ್ಪತ್ರೆಗಳಿಗೆ ‘e-DAR’ ನಮೂದು ಕಡ್ಡಾಯಗೊಳಿಸಲಾಗಿದೆ.
ಗಾಯಾಳುಗಳು ಆಸ್ಪತ್ರೆಗೆ ದಾಖಲಾದ 24 ಗಂಟೆಗಳಲ್ಲಿ (ವಿಷಮ ಸ್ಥಿತಿಯಲ್ಲಿದ್ದರೆ ಗರಿಷ್ಠ 48 ಗಂಟೆಗಳಲ್ಲಿ) e-DAR ಪೋರ್ಟಲ್ನಲ್ಲಿ ಮಾಹಿತಿ ನಮೂದಿಸಬೇಕು. ಆಸ್ಪತ್ರೆ ನೀಡಿದ ಮಾಹಿತಿಯನ್ನು ಪೊಲೀಸ್ ಇಲಾಖೆ ಪರಿಶೀಲಿಸಿ ಅನುಮೋದಿಸಿದ ತಕ್ಷಣ, ಅದು TMS ಪೋರ್ಟಲ್ಗೆ ರವಾನೆಯಾಗಿ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ನಿಗದಿತ ಅವಧಿಯಲ್ಲಿ ಮಾಹಿತಿ ದಾಖಲಿಸದಿದ್ದರೆ ಅರ್ಹ ಸಂತ್ರಸ್ತರು ಉಚಿತ ಚಿಕಿತ್ಸೆಯಿಂದ ವಂಚಿತರಾಗುವ ಅಪಾಯವಿರುವುದರಿಂದ, ಜಿಲ್ಲೆಯ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸಂಸದರು ನಿರ್ದೇಶನ ನೀಡಿದ್ದಾರೆ.ಪ್ರತಿ
ತಾಲೂಕಿನಲ್ಲಿರುವ ಪ್ರಮುಖ ಆಸ್ಪತ್ರೆಗಳೊಂದಿಗೆ ತಾಲೂಕು ಮಟ್ಟದಲ್ಲೂ ಸಭೆಗಳನ್ನು ನಡೆಸಿ, ಯೋಜನೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ (DHO) ಕ್ಯಾ.ಚೌಟ ಅವರು ಸೂಚನೆ ನೀಡಿದ್ದಾರೆ. ಯೋಜನೆಯ ಕುರಿತು ಆಸ್ಪತ್ರೆಗಳ ಹಂತದಲ್ಲಿ ಸಾರ್ವಜನಿಕವಾಗಿ ಜಾಗೃತಿ ಮೂಡಿಸಬೇಕು, ಯೋಜನೆ ಫಲಪ್ರದವಾಗಿ ಜನರಿಗೆ ತಲುಪಲು ಪ್ರಯತ್ನಿಸಬೇಕು ಎಂದರು.








