ಸುಳ್ತ:ಪ್ರಣವ್ ಫೌಂಡೇಶನ್ ವತಿಯಿಂದ ರಾಜ್ಯದ 6,500 ವಿದ್ಯಾರ್ಥಿಗಳಿಗೆ ಪುಸ್ತಕ ಕಿಟ್ ವಿತರಣೆ ಮಾಡಲಾಗುವುದು. ಆ.1ರಂದು ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆಗೆ ಚಾಲನೆ ನೀಡಲಾಗುವುದು ಎಂದು ಪೆರಾಜೆ ಜ್ಯೋತಿ ಪ್ರೌಢಶಾಲೆಯ ಸಂಚಾಲಕ ಹಾಗೂ ಪ್ರಣವ ಫೌಂಡೇಶನ್ ಸದಸ್ಯರಾದ ಮಹೇಶ್ ಕುಮಾರ್ ಮೇನಾಲ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೆರಾಜೆ
ಜ್ಯೋತಿ ಪ್ರೌಢಶಾಲೆಯಲ್ಲಿ ಆ.1ರಂದು ಪೂ.10.30ಕ್ಕೆ ಪುಸ್ತಕ ವಿತರಣೆಗೆ
ಚಾಲನೆ ನೀಡಲಾಗುವುದು. ಸುಳ್ಯ ತಾಲೂಕಿನ ಕೆಲ ಶಾಲೆಗಳು ಮತ್ತು ಮಡಿಕೇರಿ ತಾಲ್ಲೂಕಿನ ಪೆರಾಜೆ ಗ್ರಾಮದ 7 ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ಕಿಟ್ಗಳನ್ನು ವಿತರಿಸಲಾಗುವುದು.ಪುಣವ್ ಫೌಂಡೇಶನ್, ಬೆಂಗಳೂರಿನ ಆರ್.ವಿ.ಎಂಜಿನಿಯರಿಂಗ್ ಕಾಲೇಜು ಹಾಗೂ ವಿಆರ್ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ಸಹಯೋಗದಲ್ಲಿ ನಡೆಯುತ್ತಿರುವ ‘ಪುಸ್ತಕ 2025’ ಕಾರ್ಯಕ್ರಮದಡಿ, ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಹಾಗೂ ಸುಳ್ಯ ತಾಲೂಕಿನ ಮುಳ್ಯ ಅಟ್ಲೂರು ಮತ್ತು ಸುತ್ತಮುತ್ತಲಿನ ಕೆಲವು ಶಾಲೆಗಳಿಗೆ ಪುಸ್ತಕ ಕಿಟ್ಗಳನ್ನು ಆಗಸ್ಟ್ 1ರಂದು ವಿತರಿಸಲಾಗುವುದು.
ಈ ಕಾರ್ಯಕ್ರಮದಲ್ಲಿ, ಪ್ರಣವ್ ಫೌಂಡೇಶನ್ ವತಿಯಿಂದ, ಜ್ಯೋತಿ ಪ್ರೌಢಶಾಲೆಯ ಪ್ರತಿ ವಿದ್ಯಾರ್ಥಿಗೆ ತಲಾ 20-25 ನೋಟ್ಬುಕ್ಗಳಂತೆ ಒಟ್ಟು 2500 ನೋಟ್ಬುಕ್ಗಳನ್ನು ವಿತರಿಸಲಾಗುವುದು. ಹಾಗೂ 2 ಜೊತೆ ಸಮವಸ್ತ್ರ ವಿತರಿಸಲಾಗುವುದು.ಈ ವರ್ಷ ಒಟ್ಟು 6,500 ವಿದ್ಯಾರ್ಥಿಗಳಿಗೆ ಪುಸ್ತಕ ಕಿಟ್ಗಳನ್ನು ವಿತರಿಸುವ ಗುರಿ ಇದೆ. ಈ ಕಿಟ್ನಲ್ಲಿ ಎರಡು ಗೆರೆಯ ನೋಟ್ ಪುಸ್ತಕ ಹಾಗೂ ಎರಡು ಖಾಲಿ ನೋಟ್ ಪುಸ್ತಕ ಹಾಗೂ ಜಿಯೋಮೆಟ್ರಿ ಬಾಕ್ಸ್ ಇರುತ್ತದೆ. ಕಳೆದ 3 ವರ್ಷಗಳಿಂದ ಪುಸ್ತಕ ಕಾರ್ಯಕ್ರಮ ನಡೆಯುತ್ತಿದೆ. ಇದು 4ನೇ ವರ್ಷದ ಕಾರ್ಯಕ್ರಮ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜ್ಯೋತಿ ವಿದ್ಯಾ ಸಂಘದ ನಿರ್ದೇಶಕರಾದ
ಡಾ.ಎನ್.ಎ.ಜ್ಞಾನೇಶ್, ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗರಾಜ್ ಜಿ ಆರ್, ಶಾಲೆಯ ಕಚೇರಿ ನಿರ್ವಾಹಕರಾದ ಚಂದ್ರಮತಿ ಉಪಸ್ಥಿತರಿದ್ದರು.














