(ಚಿತ್ರ:ತಡರಾತ್ರಿ 33ಕೆವಿ ಲೈನ್ ದುರಸ್ತಿ ಮಾಡುವ ಸಿಬ್ಬಂದಿಗಳು)
ಸುಳ್ಯ: ಸುಳ್ಯಕ್ಕೆ ಕರೆಂಟ್ ಯಾವಾಗ ಬರುತ್ತದೆ…? ಕಳೆದ ಎರಡು ದಿನಗಳಿಂದ ಸುಳ್ಯದ ಜನತೆ, ಸಾರ್ವಜನಿಕರು ಕೇಳುವ ಪ್ರಶ್ನೆ ಇದು.. ಆದರೆ ಇದಕ್ಕೆ ಸ್ಪಷ್ಟ ಉತ್ತರ ಯಾರಿಂದಲೂ ಕೊಡಲು ಸಾಧ್ಯವಾಗುತ್ತಿಲ್ಲ.ಪರಿಣಾಮ ಸುಳ್ಯ ನಗರ ಸೇರಿದಂತೆ ತಾಲೂಕಿನ ಜನರು ಕತ್ತಲಲ್ಲಿ ಕಳೆಯುವಂತಾಗಿದೆ. ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ವಿದ್ಯುತ್ ಇಲ್ಲದೆ ಜನರ ದಶಕಗಳ
ಪರದಾಟ ಮುಂದುವರಿದಿದೆ.ಸುಳ್ಯದ ಮೆಸ್ಕಾಂ ಇಂಜಿನಿಯರ್ಗಳು ಹೇಳುವ ಪ್ರಕಾರ ಸುಳ್ಯಕ್ಕೆ ವಿದ್ಯುತ್ ಸರಬರಾಜಾಗುವ 33 ಕೆವಿ ವಿದ್ಯುತ್ ಲೈನ್ ಸರಿಪಡಿಸಿ ಮೈನ್ ಲೈನ್ ಸಪ್ಲೈ ಕೊಡಲು ಮಧ್ಯಾಹ್ನ ಆಗಬಹುದು. ಅಪರಾಹ್ನ ಎರಡು ಗಂಟೆಯ ಬಳಿಕ ವಿದ್ಯುತ್ ಬರಬಹುದು.
33 ಕೆವಿ ಲೈನ್ ಮೇಲೆ ಕುಂಬ್ರ, ಅಂಮ್ಚಿನಡ್ಕ, ಆನೆಗುಂಡಿ, ಮುಗೇರು ಮುಂತಾದ ಕಡೆಗಳಲ್ಲಿ ಮರ ಬಿದ್ದು ಕಂಬಗಳಿಗೆ ಹಾನಿಯಾಗಿದೆ, ತಂತಿಗಳೂ ತುಂಡಾಗಿ ಬಿದ್ದಿದೆ. ಇದನ್ನು ಸರಿಪಡಿಸುವ ಕೆಲಸ ರಾತ್ರಿಯೂ ಮಾಡಿದರೂ ಆಗಿಲ್ಲ, ಇವತ್ತು ಮಧ್ಯಾಹ್ನದ ವೇಳೆಗೆ ಪುನಃಸ್ಥಾಪನೆ ಸಾಧ್ಯವಾಗಬಹುದು ಎಂದು ಇಂಜಿನಿಯರ್ಗಳು ಮಾಹಿತಿ ನೀಡಿದ್ದಾರೆ.
ಶನಿವಾರ ಮಧ್ಯಾಹ್ನದ ಬಳಿಕ ಅಂಮ್ಚಿನಡ್ಕದಲ್ಲಿ 33ಕೆವಿ ಲೈನ್ ನ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಸುಳ್ಯ ಹಾಗೂ ಆಸುಪಾಸಿನ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಸ್ಥಗಿತವಾಗಿದ್ದು, ರಾತ್ರಿ 7.30ರ ಬಳಿಕ ವಿದ್ಯುತ್ ಸರಬರಾಜು ಪುನಸ್ಥಾಪನೆ ಆಗಬಹುದು ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದರು.ಆದರೆ ಭಾನುವಾರ ಬೆಲಿಗ್ಗೆ 10 ಗಂಟೆ ಆದರೂ ವಿದ್ಯುತ್ ಸರಬರಾಜು ಪುನಃಸ್ಥಾಪನೆ ಮಾಡಲು ಸಾಧ್ಯವಾಗಿಲ್ಲ. 33 ಕೆವಿ ಸರಬರಾಜು ಸರಿಯಾದ ಬಳಿಕ ಇತರ ಲೈನ್ಗಳ ದುರಸ್ತಿ ಸಾಧ್ಯ.
ಶುಕ್ರವಾರ ಸಂಜೆಯಿಂದ ಬೀಸಿದ ಗಾಳಿ ಹಾಗೂ ಮಳೆಗೆ ಸುಳ್ಯ ತಾಲೂಕಿನಾದ್ಯಂತ ವಿದ್ಯುತ್ ಸ್ಥಗಿತಗೊಂಡಿದೆ. ಶುಕ್ರವಾರ ರಾತ್ರಿಯಿಂದ ತಾಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಕಡಿತ ಉಂಟಾಗಿದೆ.
ಕಂಬಗಳಿಗೆ, ವಿದ್ಯುತ್ ಜಾಲಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ. ಶನಿವಾರ ರಾತ್ರಿ ಗಾಳಿ ಮಳೆಗೆ 13 ಹೆಚ್ಟಿ ಮತ್ತು 40 ಎಲ್ಟಿ ಕಂಬ ಸೇರಿ 53 ಕಂಬಗಳಿಗೆ ಹಾನಿ ಉಂಟಾಗಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.
ಶುಕ್ರವಾರ 30 ಹೆಚ್ಟಿ ಕಂಬ,75 ಎಲ್ಟಿ ಕಂಬಗಳು ಮುರಿದು ಬಿದ್ದು ಹಾನಿ ಸಂಭವಿಸಿದೆ. 3ಟಿಸಿ ಸ್ಟ್ರಕ್ಚರ್ಗೆ ಹಾನಿ ಉಂಟಾಗಿದ್ದು ವಿದ್ಯುತ್ ಜಾಲ ಅಸ್ತವ್ಯಸ್ತವಾಗಿದೆ.ಶನಿವಾರ ರಾತ್ರಿ ಮತ್ತೆ 50ಕ್ಕೂ ಹೆಚ್ಚು ಕಂಬಗಳಿಗೆ ಮತ್ತೆ ಹಾನಿ ಸಂಭವಿಸಿದೆ. ಜಾಲ್ಸೂರು, ಅರಂತೋಡು, ಬೆಳ್ಳಾರೆ, ಆಲೆಟ್ಟಿ ಸೇರಿದಂತೆ ಸುಳ್ಯ ಉಪ ವಿಭಾಗ ವ್ಯಾಪ್ತಿಯ ಸುಳ್ಯ ನಗರ 19 ಗ್ರಾಮಗಳಲ್ಲಿಯೂ ಕಂಬ, ಲೈನ್ಗೆ ಅಲ್ಲಲ್ಲಿ ಹಾನಿ ಸಂಭವಿಸಿದೆ ಇದರಿಂದ ತಾಲೂಕಿನ ಬಹುತೇಕ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.














