ಸುಳ್ಯ:ಸುಳ್ಯಕ್ಕೆ ಶುಕ್ರವಾರ ದಿನಪೂರ್ತಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ರಾತ್ರಿಯಾದರೂ ವಿದ್ಯುತ್ ಬಾರದೆ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಸಂಜೆಯ ವೇಳೆಗೆ ಜಾಲ್ಸೂರು ಸಮೀಪ ಕಡಿಕಡ್ಕ ಎಂಬಲ್ಲಿ ಸುಳ್ಯಕ್ಕೆ ವಿದ್ಯುತ್ ಸರಬರಾಜಾಗುವ 33 ಕೆವಿ ಲೈನ್ನ ವಯರ್ ಕಟ್ ಆಗಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಸರಬರಾಜು ಮರುಸ್ಥಾಪನೆಗೊಳ್ಳುವಾಗ ಸುಮಾರು 9.30 ಆಗುವ ಸಾಧ್ಯತೆ ಇದೆ ಎಂದು
ಮೆಸ್ಕಾಂ ಇಂಜಿನಿಯರ್ಗಳು ಮಾಹಿತಿ ನೀಡಿದ್ದಾರೆ. 33 ಕೆ.ವಿ ಕಾವು-ಸುಳ್ಯ ವಿದ್ಯುತ್ ಲೈನ್ಗಳಲ್ಲಿ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡ ಕಾರಣ ಮೇ.16ರಂದು ದಿನ ಪೂರ್ತಿ ಸುಳ್ಯದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಸಂಜೆಯ ವೇಳೆಗೆ ಒಮ್ಮೆ ವಿದ್ಯುತ್ ಚಾರ್ಜ್ ಆದರೂ ಮತ್ತೆ ಕಡಿತವಾಗಿದ್ದು ಜನರು ಕತ್ತಲಲ್ಲಿ ಕಳೆಯುವ ಸ್ಥಿತಿ ಉಂಟಾಗಿದೆ.
ನಿಯತಕಾಲಿಕ ನಿರ್ವಹಣೆಯ ಹಿನ್ನಲೆಯಲ್ಲಿ 33/11 ಕೆವಿ ಲೈನ್ನಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್ಗಳಲ್ಲಿ ಬೆಳಿಗ್ಗಿನಿಂದ ಸಂಜೆ ತನಕ ಕಡಿತ ಮಾಡಲಾಗಿತ್ತು. ದಿನ ಪೂರ್ತಿ ವಿದ್ಯುತ್ ಕಡಿತಗೊಂಡ ಕಾರಣ ಟ್ಯಾಂಕಿಗೆ ಕುಡಿಯುವ ನೀರು ಶೇಖರಣೆ ಕೂಡ ಮಾಡದೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಕುಡಿಯು ನೀರು ಇಲ್ಲದೆ ಜನರು ಪರದಾಡುವ ಸ್ಥಿತಿ ಉಂಟಾಗಿದೆ. ಬೆಳಕು, ನೀರು ಇಲ್ಲದೆ ಸುಳ್ಯ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜನರು ಪರಿತಪಿಸುವಂತಾಗಿದೆ ಎಂದು ಜನರು ಹೇಳಿದ್ದಾರೆ.