ಸುಳ್ಯ:ಎಂಟು ತಿಂಗಳ ಹಿಂದೆಯೇ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಮಾಡಿ ಕೆಪಿಸಿಸಿ ಆದೇಶ ಮಾಡಿದ್ದರೂ ಇನ್ನೂ ಸುಳ್ಯ ಬ್ಲಾಕ್ ಕಾಂಗ್ರೆಸ್ಗೆ ನೂತನ ಅಧ್ಯಕ್ಷರು ಅಧಿಕಾರ ವಹಿಸಿಲ್ಲ.ಕಳೆದ ಎಂಟು ತಿಂಗಳಿನಿಂದ ಉಂಟಾಗಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆ ವಿವಾದಕ್ಕೆ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಹೊಸ ಅಧ್ಯಕ್ಷರ ನೇಮಕಾತಿ ಇಂದು ಆಗಬಹುದು, ನಾಳೆ ಆಗಬಹುದು ಎಂಬ ನಿರೀಕ್ಷೆ ಕಾರ್ಯಕರ್ತರಲ್ಲಿ ಇದ್ದರೂ ಅದು ಇನ್ನೂ ಕಗ್ಗಂಟ್ಟಾಗಿಯೇ ಮುಂದುವರಿದಿದೆ. ಹಲವು ತಿಂಗಳುಗಳ ಕಾಲ ಹೀಗೆ ಮುಂದುವರಿಯುತ್ತಿದ್ದರೂ ಇನ್ನೊಂದು
ವಾರದಲ್ಲಿ ಹೊಸ ಅಧ್ಯಕ್ಷರ ನೇಮಕಾತಿ ಆಗಿಯೇ ಆಗುತ್ತದೆ ಎಂದು ಕೆಲವು ಮುಖಂಡರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಎನ್.ಜಯಪ್ರಕಾಶ್ ರೈ ಅವರ ಬಳಿಕ 2021ರಲ್ಲಿ ಈಗಿನ ಅಧ್ಯಕ್ಷರಾದ ಪಿ.ಸಿ.ಜಯರಾಮ ಅವರು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿದ್ದರು. ಅವರ ಅಧ್ಯಕ್ಷತೆ ಅವಧಿ ಮುಗಿದ ಹಿನ್ನಲೆಯಲ್ಲಿ 2025 ಫೆ.15ರಂದು ಸುಳ್ಯ ಬ್ಲಾಕ್ ಕಾಂಗ್ರೆಸ್ನ ನೂತನ ಅಧ್ಯಕ್ಷರಾಗಿ ಡಿಸಿಸಿ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು ನೇಮಕಗೊಂಡರು. ಇದರಿಂದ ಅಸಮಾಧಾನಗೊಂಡ ಸುಳ್ಯದ ಕೆಲವು ಕಾಂಗ್ರೆಸ್ ಮುಖಂಡರು ಅಧ್ಯಕ್ಷರ ಆಯ್ಕೆ ವಿರುದ್ಧ ಕೆಪಿಸಿಸಿಗೆ ದೂರು ನೀಡಿದರು. ಇದರಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಗೆ ತಾತ್ಕಾಲಿಕ ತಡೆ ನೀಡಿ ಕೆಪಿಸಿಸಿ ಅಧ್ಯಕ್ಷರು ಆದೇಶ ನೀಡಿದರು.ಇದರಿಂದ ಫೆ.24ರಂದು ಹಮ್ಮಿಕೊಂಡಿದ್ದ ಬೊಳ್ಳೂರು ಅಧಿಕಾರ ಸ್ವೀಕಾರವೂ ರದ್ದುಗೊಂಡಿತು.

ರಾಧಾಕೃಷ್ಣ ಬೊಳ್ಳೂರು.
ಬಳಿಕ ಈ ಕುರಿತು ಅಭಿಪ್ರಾಯ ಸಂಹ್ರಹಿಸಿ ವರದಿ ಸಲ್ಲಿಸುವಂತೆ ಕೆಪಿಸಿಸಿ ಉಪಾಧ್ಯಕ್ಷರಾದ ವಿ.ಆರ್.ಸುದರ್ಶನ ಹಾಗೂ ಕೆ.ನಾರಾಯಣ ಸ್ವಾಮಿ ಅವರನ್ನು ವೀಕ್ಷಕರಾಗಿ ಕೆಪಿಸಿಸಿ ನೇಮಕ ಮಾಡಿತ್ತು.ಅದರಂತೆ ಕೆಪಿಸಿಸಿ ವೀಕ್ಷಕರು ಮಾ.1ರಂದು ಮಂಗಳೂರು ಡಿಸಿಸಿ ಕಚೇರಿಯಲ್ಲಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿತು. ಮುಖಂಡರು, ಕಾರ್ಯಕರ್ತರು ಸೇರಿ ಸುಮಾರು 250 ಮಂದಿ ಮಂಗಳೂರಿಗೆ ತೆರಳಿ ಅಭಿಪ್ರಾಯ ನೀಡಿದ್ದರು. ವೀಕ್ಷಕರು ವರದಿ ಸಲ್ಲಿಸಿದರೂ ಸುಳ್ಯದಲ್ಲಿಯೇ ಸಭೆ ನಡೆಸಬೇಕೆಂದು
ಕೆಲವು ಮುಖಂಡರು ಪಟ್ಟು ಹಿಡಿದ ಹಿನ್ನಲೆಯಲ್ಲಿ ಮತ್ತೆ ವೀಕ್ಷಕರ ನೇಮಕ ಮಾಡಲಾಯಿತು. ವೀಕ್ಷಕರಾದ ಕೆಪಿಸಿಸಿ ಉಪಾಧ್ಯಕ್ಷ ಕೆ.ನಾರಾಯಣ ಸ್ವಾಮಿ, ಡಿಸಿಸಿ ಅಧ್ಯಕ್ಷ ಕೆ.ಹರೀಶ್ ಕುಮಾರ್, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಅವರ ತಂಡ ಜುಲೈ 8ರಂದು ಸುಳ್ಯಕ್ಕೆ ಆಗಮಿಸಿ ಅಭಿಪ್ರಾಯ ಸಂಗ್ರಹಿಸಿತು. ಸುಳ್ಯದ ಖಾಸಗೀ ಹೋಟೆಲ್ನಲ್ಲಿ ನಡೆದ ಸಭೆಗೆ ಕಾರ್ಯಕರ್ತರು, ನಾಯಕರು ಸೇರಿ ನೂರಾರು ಮಂದಿ ಆಗಮಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.ವರದಿ ನೀಡಿ ವಾರದಲ್ಲಿ ನಿರ್ಧಾರ ಹೊರ ಬರಲಿದೆ ಎಂದು ಅಂದು ವೀಕ್ಷಕರು ಹೇಳಿದ್ದರೂ ಬಳಿಕ ತಿಂಗಳು ಕಳೆದರೂ ಇನ್ನೂ ವಿವಾದಕ್ಕೆ ತೆರೆ ಬಿದ್ದಿಲ್ಲ.
ವಿವಾದ ಯಾಕೆ..?
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಗೆ ಹಲವರ ಹೆಸರು ಚಾಲ್ತಿಯಲ್ಲಿತ್ತು.ರಾಧಾಕೃಷ್ಣ ಬೊಳ್ಳೂರು, ಸೋಮಶೇಖರ ಕೊಯಿಂಗಾಜೆ, ಸರಸ್ವತಿ ಕಾಮತ್, ಪಿ.ಎಸ್.ಗಂಗಾಧರ ಹೀಗೆ ಹಲವು ಹೆಸರು ಅಧ್ಯಕ್ಷತೆಗೆ ಸಕ್ರೀಯವಾಗಿ ಕೇಳಿ ಬಂದಿತ್ತು. ಬಳಿಕ ರಾಧಾಕೃಷ್ಣ ಬೊಳ್ಳೂರು ನೇಮಕ ಆದ ಸಂದರ್ಭದಲ್ಲಿ ಅಸಮಾಧಾನ ಸ್ಪೋಟಗೊಂಡು ಎಲ್ಲಾ ನಾಯಕರ, ಪ್ರಮುಖರ ಅಭಿಪ್ರಾಯ ಪಡೆಯದೆ ನೇಮಕ ಮಾಡಲಾಗಿದೆ, ಇದನ್ನು ತಡೆ ಹಿಡಿಯಬೇಕು ಎಂದು ಒಂದು ಬಣ ಕೆಪಿಸಿಸಿಗೆ ದೂರು ನೀಡಿತ್ತು.ಅಧ್ಯಕ್ಷರ ನೇಮಕ್ಕೆ ತಡೆ ಬಿದ್ದಾಗ ವಿವಾದ ಆರಂಭಗೊಂಡಿತ್ತು. ಸುಳ್ಯ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವಿಚಾರ ಮತ್ತೊಮ್ಮೆ ಕೆಪಿಸಿಸಿ ಕದ ತಟ್ಟಿತ್ತು.
ಬಳಿಕದ ದಿನಗಳಲ್ಲಿ ಬೊಳ್ಳೂರು ಅವರನ್ನು ಅಧ್ಯಕ್ಷರಾಗಿ ಮುಂದುವರಿಸಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸುತ್ತಲೇ ಬಂದಿದ್ದಾರೆ, ಸೋಮಶೇಖರ ಕೊಯಿಂಗಾಜೆ ಅಧ್ಯಕ್ಷರಾಗಬೇಕು, ಸರಸ್ವತಿ ಕಾಮತ್ ಅವರಿಗೆ ಅಧ್ಯಕ್ಷತೆ ನೀಡಬೇಕು ಎಂಬ ಬೇಡಿಕೆಯೂ ಬೇರೆ ಬೇರೆ ಕಡೆಗಳಿಂದ ಕೇಳಿ ಬಂದಿತ್ತು. ಈ ಮಧ್ಯೆ ಸಮನ್ವತೆ ಸಾಧಿಸುವ ದೃಷ್ಠಿಯಿಂದ ಹಿರಿಯ ಕಾಂಗ್ರೆಸ್ ಮುಖಂಡರಿಗೆ ಅಧ್ಯಕ್ಷತೆಯ ಜವಾಬ್ದಾರಿ ನೀಡುವ ಬಗ್ಗೆಯೂ ಪಕ್ಷದಲ್ಲಿ ಚಿಂತನೆ ನಡೆದಿತ್ತು. ಆದರೆ ಅದ್ಯಾವುದೂ ಕೈಗೂಡಲಿಲ್ಲ.
ನೂತನ ಅಧ್ಯಕ್ಷರಿಗಾಗಿ ಕಾಯವಿಕೆ ಮಾತ್ರ ಮುಂದುವರಿದಿದೆ. ಇದೀಗ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ನಡೆದ ಹಿನ್ನಲೆಯಲ್ಲಿ ಬ್ಲಾಕ್ ಅಧ್ಯಕ್ಷರ ನೇಮಕವೂ ಶೀಘ್ರ ನಡೆಯಲಿದೆ. ವಾರದಲ್ಲಿ ಸುಳ್ಯ ಬ್ಲಾಕ್ಗೆ ನೂತನ ಅಧ್ಯಕ್ಷರ ನೇಮಕ ಆಗಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿದೆ. ಅಭಿಪ್ರಾಯ ಸಂಗ್ರಹದ ಆಧಾರದಲ್ಲಿ ರಾಧಾಕೃಷ್ಣ ಬೊಳ್ಳೂರು ಅವರೇ ಅಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ಅವರ ಬೆಂಬಲಿಗರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಲ್ಲಾ ಬದಲಾಗುವ ಸಾಧ್ಯತೆ ಇದೆ ಇನ್ನೊಂದು ಗುಂಪಿನ ಪ್ರಮುಖರು ಹೇಳುತ್ತಾರೆ. ಆದರೆ ಚೆಂಡು ಹೈಕಮಾಂಡ್ ಅಂಗಳದಲ್ಲಿಯೇ ಗಿರಕಿ ಹೊಡೆಯುತಿದೆ. ಕೆಪಿಸಿಸಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ನಿರ್ಧಾರ ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ.
ನಾವಿಕನಿಲ್ಲದ ದೋಣಿ…?
ಮುಂದೆ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ.
ಈ ಸಂದರ್ಭದಲ್ಲಿ ಪಕ್ಷವನ್ನು ಮುನ್ನಡೆಸಲು ಸಮರ್ಥರಾದವರನ್ನು ಅಧ್ಯಕ್ಷರಾಗಿ ಮಾಡಬೇಕು ಎಂಬ ಬೇಡಿಕೆ ಕಾರ್ಯಕರ್ತರದ್ದು. ಚುನಾವಣೆಗೆ ಸಿದ್ಧರಾಗಲು ಪಕ್ಷವನ್ನು ಮುನ್ನಡೆಸಬೇಕಾದ ಸಂದರ್ಭದಲ್ಲಿ ಸುಳ್ಯದಲ್ಲಿ ಪಕ್ಷದ ಸ್ಥಿತಿ ನಾವಿಕನಿಲ್ಲದ ದೋಣಿಯಂತಾಗಬಾರದು ಎಂಬುದು ಕಾರ್ಯಕರ್ತರ ಒತ್ತಾಸೆ.
ಇದೀಗ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದರೂ ಅದರ ಪ್ರಯೋಜನ ಪಡೆದು ವಿದ್ಯುತ್, ರಸ್ತೆ ಸೇರಿದಂತೆ ಸುಳ್ಯದ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೂ ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಕೆಲವು ಕಾರ್ಯಕರ್ತರಲ್ಲಿ ಇದೆ. ನೂತನ ಅಧ್ಯಕ್ಷರ ನೇಮಕದ ಜೊತೆಗೆ ಸುಳ್ಯಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿ ಮಂದಿನ ಎರಡೂವರೆ ವರ್ಷದ ಬಳಿಕ ಬರುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ಈಗಲೇ ಆರಂಭಿಸಬೇಕು ಎಂಬುದು ಕಾಂಗ್ರೆಸ್ ಬೆಂಬಲಿಗರ ಅಭಿಪ್ರಾಯ… ಮುಂದಿನ ರಾಜಕೀಯ ಹೈಡ್ರಾಮಕ್ಕಾಗಿ ಕಾತರದ ಕಾಯುವಿಕೆ ಮುಂದುವರಿದಿದೆ..!















