ಸುಳ್ಯ: ಸುಳ್ಯ ಭೂ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 12 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಧಿಕಾರ ಪಡೆದಿದ್ದಾರೆ. 7 ಸ್ಥಾನಗಳಿಗೆ ನಿರ್ದೇಶಕರ ಆಯ್ಕೆಗಾಗಿ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು 5 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ ಬೆಂಬಲಿತ ಓರ್ವ ಹಾಗೂ ಓರ್ವ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಒಟ್ಟು 14 ನಿರ್ದೇಶಕರ ಆಯ್ಕೆಯಲ್ಲಿ 7 ಮಂದಿ ಬಿಜೆಪಿ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದರು. ತಾಲೂಕಿನ ಒಟ್ಟು
14 ವಲಯಗಳಲ್ಲಿ 23 ನಾಮಪತ್ರ ಸಲ್ಲಿಕೆಯಾಗಿದ್ದು ಶಾಸಕಿ ಭಾಗೀರಥಿ ಮುರುಳ್ಯ ಸೇರಿ 7 ಮಂದಿ ಅವಿರೋಧ ಆಯ್ಕೆಯಾಗಿದ್ದರು. ಚುನಾವಣೆ ನಡೆದ 7 ಸ್ಥಾನಗಳಿಗೆ 16 ಮಂದಿ ಕಣದಲ್ಲಿದ್ದರು. ಪ್ರಮುಖರಾದ ಶೈಲೇಶ್ ಅಂಬೆಕಲ್ಲು, ಸೋಮನಾಥ ಪೂಜಾರಿ ಚುನಾವಣೆಯಲ್ಲಿ ಪರಾಜಿತರಾಗಿದ್ದಾರೆ
ಜಾಲ್ಸೂರು ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯರಾಮ ರೈ ಕೆ. ಗೆಲುವು ಸಾಧಿಸಿದ್ದಾರೆ, ಸುರೇಶ್ ಕೆ ಪರಾಭವಗೊಂಡರು.
ನೆಲ್ಲೂರು ಕೆಮ್ರಾಜೆ ಹಿಂದುಳಿದ ವರ್ಗ ಬಿ” ಸ್ಥಾನದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹಾವೀರ ಜಿ ಗೆಲುವು ಸಾಧಿಸಿದರು. ದೇವಿಪ್ರಸಾದ್ ಎಸ್ ಪರಾಭವಗೊಂಡರು.

ಸುಳ್ಯ ಹಿಂದುಳಿದ ವರ್ಗ ಎ” ಸ್ಥಾನದಿಂದ ಸ್ವತಂತ್ರ ಅಭ್ಯರ್ಥಿ ಜ್ಞಾನೇಶ್ವರ ಶೇಟ್ ಗೆಲುವು ಸಾಧಿಸಿದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೆ. ಸೋಮನಾಥ ಪೂಜಾರಿ ಪರಾಜಿತರಾದರು.
ಆಲೆಟ್ಟಿ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಧರ್ಮಪಾಲ ಕೆ ಜಯ ಗಳಿಸಿದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿಜಯ ಪಿ ಸೋತರು.
ಐವರ್ನಾಡು ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಣಪಯ್ಯ ಪಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಜುನಾಥ ಪಿ ಮಧ್ಯೆ ಸಮಾನ ಮತ ಬಂದು ಟೈ ಆಯಿತು. ಬಳಿಕ ಡ್ರಾ ಎತ್ತುವ ಮೂಲಕ ಬಿಜೆಪಿ ಅಭ್ಯರ್ಥಿ ಗಣಪಯ್ಯ ವಿಜಯಿಯಾದರು.
ಗುತ್ತಿಗಾರು ಕ್ಷೇತ್ರದಲ್ಲಿ ಪ.ಪಂ.ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾವೇರಿ ಕೆ ಜಯ ಗಳಿಸಿದರು.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಾಲಕೃಷ್ಣ ಬಿ ಪರಾಭವಗೊಂಡರು.
ಸಾಲಗಾರರಲ್ಲದ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅವಿನಾಶ್ ಡಿ.ಕೆ ಗೆಲುವು ಸಾಧಿಸಿದರು.ಸ್ವತಂತ್ರ ಅಭ್ಯರ್ಥಿ ಶೈಲೇಶ್ ಅಂಬೆಕಲ್ಲು ಪರಾಭವಗೊಂಡರು.
ಇಂದು ಸುಳ್ಯ ಸಿ.ಎ.ಬ್ಯಾಂಕ್ ಸಭಾಭವನದಲ್ಲಿ ಮತದಾನ ಕೇಂದ್ರದಲ್ಲಿ ಮತದಾನ ನಡೆದು ಮತ ಎಣಿಕೆ ಮಾಡಲಾಯಿತು.