ಸುಳ್ಯ: ದ.ಕ.ಜಿಲ್ಲಾ ಕಾಂಗ್ರೆಸ್ ಹಾಗೂ ದ.ಕ.ಜಿಲ್ಲಾ ರಾಜೀವ್ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ನೇತೃತ್ವದಲ್ಲಿ ಪಂಚಾಯತ್ ರಾಜ್ ಪ್ರತಿನಿಧಿಗಳ ಜಿಲ್ಲಾ ಸಮಾವೇಶ ಅ.3 ರಂದು ಮಂಗಳೂರು ಪುರಭವನದಲ್ಲಿ ನಡೆಯಲಿದೆ ಎಂದು ರಾಜೀವ್ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ದ.ಕ.ಜಿಲ್ಲಾ ಅಧ್ಯಕ್ಷ ಶುಭಾಶ್ಚಂದ್ರ ಶೆಟ್ಟಿ ತಿಳಿಸಿದ್ದಾರೆ. ಸುಳ್ಯ ಪ್ತೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ
ನಡೆಯುವ ಸಮಾವೇಶವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸುವರು. ಪಂಚಾಯತ್ ರಾಜ್ ಅಧಿನಿಯಮದ ಪರಿಚಯವನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾಡಲಿದ್ದಾರೆ. ಪಂಚಾಯತ್ ರಾಜ್ ಕುರಿತು 6 ವಿಧಾನಸಭಾ ಕ್ಷೇತ್ರದ ತಲಾ ಒಬ್ಬ ಗ್ರಾ.ಪಂ.ಸದಸ್ಯ, ಓರ್ವ ತಾ.ಪಂ.ಮಾಜಿ ಅಧ್ಯಕ್ಷ, ಓರ್ವ ಮಾಜಿ ಜಿ.ಪಂ.ಅಧ್ಯಕ್ಷರಿಂದ ವಿಚಾರ ಮಂಡನೆ ನಡೆಯಲಿದೆ.
ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಂವಾದ, ಸಚಿವರುಗಳಿಗೆ ಸನ್ಮಾನ ನಡೆಯಲಿದೆ.
ಪಂಚಾಯತ್ ರಾಜ್ ಇಲಾಖೆಯ ಸಮಸ್ಯೆಗಳು, ತಾಂತ್ರಿಕ ಅಡಚಣೆಹಳು, ಅನುದಾನ, ಪಂಚಾಯತ್ ರಾಜ್ ಇಲಾಖೆ ಮತ್ತು ಇತರ ಇಲಾಖೆಗಳಲ್ಲಿನ ಸಮನ್ವಯತೆ ಮತ್ತಿತರ ವಿಚಾರಗಳ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ. ಗ್ರಾ.ಪಂ.ಹಾಗೂ ನಗರ ಸ್ಥಳೀಯ ಸಂಸ್ಯೆಗಳ ಹಾಲಿ ಮಾಜಿ ಸದಸ್ಯರು, ತಾ.ಪಂ ಹಾಗೂ ಜಿ.ಪಂ. ಮಾಜಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜೀವ್ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಅಶೋಕ್ ಚೂಂತಾರು, ಜಿಲ್ಲಾ ಉಪಾಧ್ಯಕ್ಷೆ ಲೀಲಾ ಮನಮೋಹನ್ ,ಸುಳ್ಯ ತಾಲೂಕು ಅಧ್ಯಕ್ಷ ಜಯಪ್ರಕಾಶ್ ನೆಕ್ರಪ್ಪಾಡಿ ಉಪಸ್ಥಿತರಿದ್ದರು.