ಪಂಪಾ: ಸುಳ್ಯ ತಾಲೂಕಿನ ಮಂಡೆಕೋಲು ಕಣೆಮರಡ್ಕ ಅಯ್ಯಪ್ಪ ಮಂದಿರದಿಂದ ಮಾಲೆ ಧರಿಸಿದ ಅಯ್ಯಪ್ಪ ಭಕ್ತವೃಂದ ಶಬರಿಮಲೆ ಯಾತ್ರೆ ಮುಗಿಸಿ ಮರಳುವ ವೇಳೆ ಪವಿತ್ರ ಪಂಪಾ ನದಿ ಸ್ವಚ್ಚ ಮಾಡುವ ಕಾರ್ಯ ಕೈಗೊಂಡರು.ಇವರು ನಿರಂತರ ನಾಲ್ಕು ವರ್ಷದಿಂದ ನದಿ ಸ್ವಚ್ಚತಾ ಕಾರ್ಯ ಮಾಡಿರುತ್ತಾರೆ. ಪಂಪಾ ನದಿಯ ನೀರಿನಲ್ಲಿದ್ದ ಬಟ್ಟೆಬರೆ ಮತ್ತಿತರ ತ್ಯಾಜ್ಯ ವಸ್ತುಗಳನ್ನು ಹೊರ ತೆಗೆದು ತೆರವು ಮಾಡಲಾಯಿತು.ಪಂಪಾ ನದಿಯಲ್ಲಿ
ಪಾವಿತ್ರ್ಯತೆ ಕಾಪಾಡುವ ಸಲುವಾಗಿ ಸರಕಾರ ಹಾಗೂ ಸರಕಾರೇತರ ಸಂಘಸಂಸ್ಥೆಗಳು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿವೆ. ಕೇರಳ ರಾಜ್ಯ ಡಿಜಿಪಿ ವಿಜಯನ್ ಶಬರಿಮಲೆ ವಿಶೇಷ ಕರ್ತವ್ಯಾಧಿಕಾರಿಗಳಾಗಿದ್ದ ಸಂದರ್ಭ ಪುಣ್ಯ ಪೂಂಗಾವನವ್ ಹೆಸರಿನಡಿಯಲ್ಲಿ ಹಾಕಿಕೊಂಡ ವಿಶೇಷ ಜಾಗೃತಿ ಕಾರ್ಯಕ್ರಮಕ್ಕೆ ಪೂರಕವಾಗಿ ಸುರೇಶ್ ಕಣೆಮರಡ್ಕ ನೇತೃತ್ವದ ಮಾಲಾಧಾರಿಗಳ ತಂಡ ಮೂರು ವರ್ಷದ ಹಿಂದೆ ಪ್ರಥಮ ಬಾರಿಗೆ ಬೃಹತ್ ಸ್ವಚ್ಚತಾ ಕಾರ್ಯ ಹಮ್ಮಿಕೊಂಡಿತ್ತು. ಈ ಸ್ವಚ್ಚತಾ ಕಾರ್ಯಕ್ರಮದ
ಬಗ್ಗೆ ಪೋಲಿಸ್ ಇಲಾಖೆಯಿಂದ ಮಾಹಿತಿ ತಿಳಿದ ಡಿಜಿಪಿ ವಿಜಯನ್ ರವರ ತಂಡ ಪಂದಳಂ ನಿಂದ ಪಂಪಾಗೆ ಆಗಮಿಸಿ ಖುದ್ದು ತಮ್ಮ ಪುಣ್ಯ ಪೂಂಗಾವನಮ್ ಕಾರ್ಯಕ್ರಮದ ಸಮವಸ್ತ್ರ ನೀಡಿ ತಂಡದ ಸೇವಾ ಕಾರ್ಯದ ಬಗ್ಗೆ ಶ್ಲಾಘಿಸಿದ್ದರು.
ಆ ಬಳಿಕ ಮಂಡೆಕೋಲಿನ ಅಯ್ಯಪ್ಪ ಮಾಲಾಧಾರಿಗಳ ತಂಡ ಪ್ರತಿ ವರ್ಷ ನದಿ ಸ್ವಚ್ಛತಾ ಕಾರ್ಯ ನಡೆಸುತ್ತಾರೆ. ಇದೀಗ ಈ ವರ್ಷ ಕೂಡ ಶಬರಿಗಿರಿ ಸೇವಾ ಪ್ರತಿಷ್ಠಾನದ ಹೆಸರಿನಡಿಯಲ್ಲಿ ಸುರೇಶ್ ಕಣೆಮರಡ್ಕ ನೇತೃತ್ವದಲ್ಲಿ ಅಯ್ಯಪ್ಪ ವೃತಧಾರಿಗಳು ನಿರಂತರ ನಾಲ್ಲನೇ ವರ್ಷ ಪಂಪಾ ನದಿ ಸ್ವಚ್ಚತಾ ಕಾರ್ಯ ಕೈಗೊಂಡರು.