ಪ್ಯಾರಿಸ್: ಫ್ರಾನ್ಸ್ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ನಿರೀಕ್ಷೆಯಾಗಿರುವ 22 ವರ್ಷದ ಶೂಟರ್ ಮನು ಭಾಕರ್ ಫೈನಲ್ಗೆ ಪ್ರವೇಶಿಸಿದ್ದಾರೆ.
ಶೂಟಿಂಗ್ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್ ಅಂತಿಮ ಸುತ್ತಿಗೆ ಪ್ರವೇಶಿಸಿದ್ದಾರೆ.ಮೂರು ವರ್ಷಗಳ
ಹಿಂದೆ ಪಿಸ್ತೂಲ್ ದೋಷದಿಂದಾಗಿ ಫೈನಲ್ಗೆ ಪ್ರವೇಶಿಸಲು ವಿಫಲರಾಗಿದ್ದ ಮನು, ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಫೈನಲ್ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು (ಶನಿವಾರ) ನಡೆದ ಅರ್ಹತಾ ಸುತ್ತಿನಲ್ಲಿ 580 ಅಂಕ ಪಡೆದ ಮನು, ಮೂರನೇಯವರಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಆ ಮೂಲಕ ಪದಕದ ನಿರೀಕ್ಷೆ ಮೂಡಿಸಿದ್ದಾರೆ. ಸರಣಿ 1 ನಂತರ ಅವರು 97 ಪಾಯಿಂಟ್ಳೊಡನೆ ಉತ್ತಮ ಆರಂಭ ಮಾಡಿ ನಾಲ್ಕನೇ ಸ್ಥಾನದಲ್ಲಿದ್ದರು. ಎರಡನೇ ಸರಣಿ ನಂತರ ಹರಿಯಾಣದ ಶೂಟರ್ 97 ಸ್ಕೋರ್ನೊಡನೆ ಅದೇ ಸ್ಥಾನ ಉಳಿಸಿಕೊಂಡರು. ಮೂರನೇ ಸಿರೀಸ್ ನಂತರ 98 ಪಾಯಿಂಟ್ಸ್ ಗಳಿಸಿ ಅಗ್ರ ಎರಡರಲ್ಲಿ ಸ್ಥಾನ ಪಡೆದರು.
ಹಂಗೇರಿಯ ವೆರೊನಿಕಾ ಮೇಜರ್ 582 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಫೈನಲ್ಗೆ ಲಗ್ಗೆ ಇಟ್ಟರು. ಭಾರತೀಯ ಕಾಲಮಾನ ಭಾನುವಾರ ಸಂಜೆ 3.30ಕ್ಕೆ ಫೈನಲ್ ನಡೆಯಲಿದೆ.