ಸುಳ್ಯ: ಸುಳ್ಯದಲ್ಲಿ ಪ್ರಥಮ ಬಾರಿಗೆ ಪ್ರೊ ಮಾದರಿಯ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ ನ.17 ಮತ್ತು 18ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯಲ್ಲಿರುವ ಪ್ರಭು ಮೈದಾನದಲ್ಲಿ ನಡೆಯಲಿದೆ. ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ 8ನೇ ವಾರ್ಷಿಕೋತ್ಸವದ ಅಂಗವಾಗಿ ಅಮೆಚೂರು ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ ನಡೆಯುವ ಕಬಡ್ಡಿ ಪಂದ್ಯಾಟದ
ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಪಂದ್ಯಾಟದ ಕಚೇರಿಯಲ್ಲಿ ಸೆ.14ರಂದು ನಡೆಯಿತು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ
ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶಿವಪ್ರಕಾಶ್ ಸುಳ್ಯ ಹಾಗೂ ಕಬಡ್ಡಿ ಪಂದ್ಯಾಟದ ಸಂಘಟನಾ ಸಮಿತಿಯ ಅಧ್ಯಕ್ಷ ಸಂಶುದ್ದೀನ್ ಭಾರತ್ ಶಾಮಿಯಾನ ಅವರು ಪಂದ್ಯಾಟದ ಮಾಹಿತಿ ನೀಡಿದರು. ರಾಷ್ಟ್ರೀಯ ಮಟ್ಟದ ಆಟಗಾರರನ್ನು ಒಳಗೊಂಡ
8 ಆಹ್ವಾನಿತ ತಂಡಗಳ ಎ ಗ್ರೇಡ್ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಆಯೋಜನೆ ಮಾಡಲಾಗಿದ್ದು ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಹರಿಯಾಣ ಹಾಗೂ ದೆಹಲಿ ರಾಜ್ಯದ ಪುರುಷರ ತಂಡಗಳು ಭಾಗವಹಿಸಲಿದೆ. ಪಂದ್ಯಾಟವು ಸಂಪೂರ್ಣ ಪ್ರೊ ಮಾದರಿಯಲ್ಲಿ ಲೀಗ್ ಪಂದ್ಯಾಟ ನಡೆಯಲಿದ್ದು. ಪ್ರೊ ಕಬಡ್ಟಿಯಲ್ಲಿನ ಎಲ್ಲಾ ಆಧುನಿಕ ತಂತ್ರಜ್ಞಾನವನ್ನು, ನಿಯಮಗಳನ್ನು ಅಳವಡಿಸಲಾಗುವುದು. ಪ್ರೊ ಕಬಡ್ಡಿ ತಂಡದ ಆಟಗಾರರು, ರಾಷ್ಟ್ರೀಯ ಆಟಗಾರರು ಭಾಗವಹಿಸಲಿದ್ದಾರೆ. ನ.19 ರಂದು ಮಹಿಳಾ ತಂಡಗಳು ಭಾಗವಹಿಸುವ ಪಂದ್ಯಾಟ ಆಯೋಜಿಸುವ ಯೋಜನೆ ಇದೆ ಎಂದರು. ವಿಜೇತ ತಂಡಗಳಿಗೆ ಪ್ರಥಮ ಬಹುಮಾನ
1 ಲಕ್ಷ ಮತ್ತು ಟ್ರೋಫಿ, ದ್ವಿತೀಯ ಬಹುಮಾನ 65,000 ಮತ್ತು ಟ್ರೋಫಿ, ತೃತೀಯ ಬಹುಮಾನ 35,000 ಮತ್ತು ಟ್ರೋಫಿ, ಚತುರ್ಥ ಬಹುಮಾನ 35,000 ಮತ್ತು ಟ್ರೋಫಿ ನೀಡಲಾಗುವುದು ಎಂದು ವಿವರ ನೀಡಿದರು.
ಪಂದ್ಯಾಟ ವೀಕ್ಷಣೆಗೆ ಬರುವ ಕ್ರೀಡಾಭಿಮಾನಿಗಳಿಗೆ ದಿನಕ್ಕ 200 ರೂ ಪ್ರವೇಶ ಶುಲ್ಕ ನಿಗದಿಪಡಿಸಲಾಗುವುದು. ಪಂದ್ಯಾಟಕ್ಕೆ ಮುಂಚಿತವಾಗಿ ಸುಳ್ಯದ ಪ್ರಮುಖ ಬೀದಿಗಳಲ್ಲಿ ಆಟಗಾರರ ಕ್ರೀಡಾ ಜ್ಯೋತಿಯ ಜಾಥಾ ನಡೆಯಲಿರುವುದು. ಮಹಿಳೆಯರಿಗೆ ಪ್ರತ್ಯೇಕವಾಗಿ ಕುಳಿತುಕೊಂಡು ಪಂದ್ಯಾಟವನ್ನು ವೀಕ್ಷಿಸಲು ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ವಿವರಿಸಿದರು.
ಸಂಘಟನಾ ಸಮಿತಿಯ ಪ್ರಮುಖರಾದ ಗುರುದತ್ ನಾಯಕ್ ಮಾತನಾಡಿ
4 ಸಾವಿರ ಮಂದಿಗೆ ಕುಳಿತು ಕೊಳ್ಳಬಹುದಾದ ಗ್ಯಾಲರಿ ಸೇರಿ ಸುಮಾರು 7 ಸಾವಿರ ಮಂದಿಗೆ ಆಟ ವೀಕ್ಷಣೆ ಮಾಡುವ ವ್ಯವಸ್ಥೆ ಮಾಡಲಾಗುವುದು.ಇಂಡೋರ್ ಸ್ಟೇಡಿಯಂ ಮಾದರಿಯಲ್ಲಿ ಕ್ರೀಡಾಂಗಣವನ್ನು ಸಜ್ಜುಗೊಳಿಸಲಾಗುವುದು. ಎಲ್.ಇ.ಡಿ ಪರದೆಗಳನ್ನು ಅಳವಡಿಸಲಾಗುವುದು. ಆತ್ಯಾಧುನಿಕ ಲೈಟಿಂಗ್ಸ್ ಮತ್ತು ಅಲಂಕಾರವನ್ನು ಒಳಗೊಂಡ ಆಕರ್ಷಕ ವೇದಿಕೆಯನ್ನು ನಿರ್ಮಾಣ ಮಾಡಲಾಗುವುದು.
ಪಂದ್ಯಾಟ ಸಹಾಯಾರ್ಥ ಲಕ್ಕಿಡಿಪ್ ಕೂಪನ್ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಸಮಿತಿ ಸಂಚಾಲಕ ಶಾಫಿ ಪ್ರಗತಿಪೈಚಾರು,ಸಂಯೋಜಕ ಜಿ.ಜಿ ನಾಯಕ್ ಸುಳ್ಯ, ಕಾರ್ಯದರ್ಶಿ ಸತೀಶ್ ಕಲ್ಲುಗುಂಡಿ ಮತ್ತಿತರರು ಉಪಸ್ಥಿತರಿದ್ದರು.