ನಾಗೋಯಾ: 20ನೇ ಏಷ್ಯಾ ಕ್ರೀಡಾಕೂಟಕ್ಕೆ ಶನಿವಾರ ಅಧಿಕೃತ ಚಾಲನೆ ದೊರೆಯಿತು. ನಾಗೋಯಾದ ಮಿಝಹೊ ಪಾರ್ಕ್ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಭಾರತದ 501 ಆಟಗಾರರ ತಂಡವನ್ನು ಒಲಿಂಪಿಕ್ ಪದಕ ವಿಜೇತ ಶೂಟರ್ ಮನು ಭಾಕರ್ ಮತ್ತು ಕಬಡ್ಡಿ ಆಟಗಾರ ಪವನ್ ಸೆಹ್ರಾವತ್ ಮುನ್ನಡೆಸಿದರು. ಸಮಾರಂಭದಲ್ಲಿ
ಜಪಾನ್ ದೊರೆ ನರುಹಿಟೊ, ರಾಣಿ ಮಸಾಕೊ, ರಾಜಕುಮಾರ ಅಕಿಶಿನೊ, ರಾಜಕುಮಾರಿ ಕಿಕೊ ಮತ್ತು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಅಧ್ಯಕ್ಷ ಶೇಖ್ ಜೊವಾನ್ ಬಿನ್ ಹಮದ್ ಅಲ್ ಥಾನಿ ಉಪಸ್ಥಿತರಿದ್ದರು.
2024ರಲ್ಲಿ ಪ್ಯಾರಿಸ್ನಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಎರಡು ಪದಕಗಳನ್ನು ಗೆದ್ದಿದ್ದ ಭಾರತದ ಶೂಟರ್ ಮನು ಹಾಗೂ ಶಾಟ್ಪುಟ್ ಎಸೆತಗಾರ ತಜೀಂದರ್ಪಾಲ್ ಸಿಂಗ್ ತೂರ್ ಅವರನ್ನು ಭಾರತದ ಧ್ವಜಧಾರಿಗಳನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ತೂರ್ ಅವರಿಗೆ ಉದ್ಘಾಟನಾ ಸಮಾರಂಭದ ಪೋಷಾಕು ಸಮಯಕ್ಕೆ ಸರಿಯಾಗಿ ಸಿಗಲಿಲ್ಲ. ಹೀಗಾಗಿ,
ಕಳೆದ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದಿದ್ದ ಪುರುಷರ ಕಬಡ್ಡಿ ತಂಡದ ಆಟಗಾರ ಪವನ್ ಸೆಹ್ರಾವತ್ ಅವರು ಮನು ಜೊತೆ ಧ್ವಜ ಹಿಡಿದು ನಡೆದರು.ಕೆಲವು ಸ್ಪರ್ಧೆಗಳು ಈಗಾಗಲೇ ಆರಂಭವಾಗಿವೆ. ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡ ಆತಿಥೇಯ ಜಪಾನ್ ವಿರುದ್ಧ ಗೆದ್ದು ಸೆಮಿಫೈನಲ್ ತಲುಪಿದೆ.
ಈ ಬಾರಿ ಒಟ್ಟು ಸುಮಾರು 11 ಸಾವಿರ ಕ್ರೀಡಾಳುಗಳು ಭಾಗವಹಿಸಿದ್ದಾರೆ. 469 ಚಿನ್ನದ ಪದಕಗಳಿಗಾಗಿ 43 ಕ್ರೀಡೆಗಳಲ್ಲಿ ಸ್ಪರ್ಧೆ ನಡೆಯಲಿದೆ.2023ರಲ್ಲಿ ಹಾಂಗ್ಝೌನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತ 28 ಚಿನ್ನ ಸೇರಿ ಒಟ್ಟು 106 ಪದಕಗಳನ್ನು ಗೆದ್ದಿತ್ತು. ಅದು ದೇಶದ ಪಾಲಿಗೆ ಅತ್ಯುತ್ತಮ ಸಾಧನೆಯಾಗಿದೆ. ಕ್ರೀಡಾಕೂಟವು ಅಕ್ಟೋಬರ್ 4ರವರೆಗೆ ನಡೆಯಲಿದೆ.








