ಬೆಂಗಳೂರು: ವಿಧಾನ ಪರಿಷತ್ನ ಪದವೀಧರರು ಮತ್ತು ಶಿಕ್ಷಕರ ಆರು ಕ್ಷೇತ್ರಗಳ ಮತ ಎಣಿಕೆ ಗುರುವಾರ ನಡೆಯುತಿದೆ. ಮೈಸೂರು, ಬೆಂಗಳೂರು ಮತ್ತು ಕಲಬುರಗಿಯಲ್ಲಿ ಮತ ಎಣಿಕೆ ಬೆಳಿಗ್ಗೆ 8 ರಿಂದ ಆರಂಭಗೊಂಡಿದೆ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ಯ ಪದವೀಧರರ ಕ್ಷೇತ್ರಗಳ ಮತ ಎಣಿಕೆ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ನಡೆಯುತಿದೆ. ಬೆಂಗಳೂರು ಪದವೀಧರರ ಕ್ಷೇತ್ರ ಮತ್ತು
ಆಗ್ನೇಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಅರಂಭಗೊಂಡಿದೆ. ಈಶಾನ್ಯ ಪದವೀಧರರ ಕ್ಷೇತ್ರದ ಮತ ಎಣಿಕೆ ಕಲಬುರಗಿ ನಗರದ ಗುಲ್ಬರ್ಗ ವಿಶ್ವವಿದ್ಯಾಲಯದ ಹೇಮರೆಡ್ಡಿ ಮಲ್ಲಮ್ಮ ಕಟ್ಟಡದಲ್ಲಿ ನಡೆಯುತಿದೆ.
ಗುರುವಾರ ಬೆಳಿಗ್ಗೆ 8 ಗಂಟೆಯಿಂದ ಎಲ್ಲ ಕೇಂದ್ರಗಳಲ್ಲೂ ಮತ ಎಣಿಕೆ ಆರಂಭವಾಗಿದೆ. ಪ್ರಾಶಸ್ತ್ಯದ ಮತಗಳ ಎಣಿಕೆ ಮಾಡಬೇಕಿರುವುದರಿಂದ ಫಲಿತಾಂಶ ಹೊರಬೀಳುವುದು ತಡವಾಗುವ ಸಾಧ್ಯತೆ ಇದೆ. ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಯಾರೊಬ್ಬರೂ ಗೆಲುವು ಸಾಧಿಸದಿದ್ದರೆ, ನಂತರದ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಸಬೇಕಾಗುತ್ತದೆ. ಹೀಗಾಗಿ ಫಲಿತಾಂಶ ಪ್ರಕಟವಾಗುವುದು ತಡವಾಗುತ್ತದೆ ಎಂದು ಮೂಲಗಳು ತಿಳಿಸಿವೆ.