ಸುಳ್ಯ:ಶಾಸಕಿ ಭಾಗೀರಥಿ ಮುರುಳ್ಯ ಅವರು ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆಯ ವ್ಯವಸ್ಥೆಗಳ ಪರಿಶೀಲನೆ ನಡೆಸಿದ ಅವರು ವಾರ್ಡ್ಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಒಳರೋಗಿಗಳ ಆರೋಗ್ಯ ವಿಚಾರಿಸಿದರು. ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕೆ.ವಿ.ಕರುಣಾಕರ ಅವರಿಂದ
ಆಸ್ಪತ್ರೆಯ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.
ಹೆರಿಗೆ ತಜ್ಞರ ಕೊರತೆ ನೀಗಿಸಲು ಕ್ರಮ:
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಕಳೆದ 10 ವರ್ಷಗಳಿಂದ ಖಾಯಂ ಹೆರಿಗೆ ತಜ್ಞರು ಇಲ್ಲದೆ ಇರುವ ಕಾರಣ ಆಗಿರುವ ಸಮಸ್ಯೆಗಳ ಮತ್ತು ದೂರುಗಳ ಬಗ್ಗೆ, ಹೆರಿಗೆ ತಜ್ಞರ ಕೊರತೆಯಿಂದ ಆಗಿರುವ ಸಮಸ್ಯೆಯ ನಿಭಾಯಿಸುವ ಬಗ್ಗೆ ಶಾಸಕರು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ಹಾಗೂ ಶುಶ್ರೂಷಕಿಯರ ಜೊತೆ ಮಾತುಕತೆ ನಡೆಸಿದರು. ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ.ಮಾತನಾಡಿ
ಕರೆ ಆಧಾರದಲ್ಲಿ ಬರುವ ಪ್ರಸೂತಿ ತಜ್ಞರು ಸಿಬ್ಬಂದಿಗಳಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ದೂರು ಇದೆ ಎಂದು ಕೆಆರ್ಎಸ್ ಪಕ್ಷದ ಕಾರ್ಯಕರ್ತರು ವಾರದ ಹಿಂದೆ ದೂರು ಸಲ್ಲಿಸಿದ್ದರು. ಏನಾದರು ಸಮಸ್ಯೆಗಳು ಇದ್ದರೆ ಸಿಬ್ಬಂದಿಗಳು ಲಿಖಿತ ದೂರು ನೀಡುವಂತೆ ತಿಳಿಸಲಾಗಿದ್ದರೂ, ಯಾವುದೇ ದೂರು ಬಂದಿಲ್ಲ ಎಂದು ಹೇಳಿದರು. ಏನಾದರು ಸಮಸ್ಯೆಗಳು, ದೂರುಗಳು ಇದ್ದರೆ ಶಾಸಕರಲ್ಲಿ ಹೇಳಬಹುದು ಎಂದು ಹೇಳಿದರು. ಏನಾದರು ಸಮಸ್ಯೆಗಳು ಇದ್ದರೆ
ತಿಳಿಸಿ ಎಂದು ಶಾಸಕರು ಕೂಡ ಹೇಳಿದರು. ಈ ಸಂದರ್ಭದಲ್ಲಿ
ಶುಶ್ರೂಕಿಯರು, ಸಿಬ್ಬಂದಿಗಳು ತಮ್ಮ ಸಮಸ್ಯೆಗಳನ್ನು ಶಾಸಕರಲ್ಲಿ ಹೇಳಿಕೊಂಡರು. ಸಮಸ್ಯೆಗಳನ್ನು ಆಲಿಸಿದ ಶಾಸಕರು
ಪರ್ಯಾಯ ವ್ಯವಸ್ಥೆ ಏನು ಮಾಡಬಹುದು ಎಂಬುದರ ಬಗ್ಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ಅಭಿಪ್ರಾಯ ಕೇಳಿದರು. ಗುತ್ತಿಗೆ ಆಧಾರದಲ್ಲಿ ಪ್ರಸೂತಿ ತಜ್ಞರ ನೇಮಕ ಮಾಡಲು ಅವಕಾಶ ಇದೆ. ಆದರೆ ತಜ್ಞ ವೈದ್ಯರು ಸಿಕ್ತಾ ಇಲ್ಲ, ಈ ಹಿನ್ನಲೆಯಲ್ಲಿ ಕರೆ ಆಧಾರದಲ್ಲಿ ಹೆರಿಗೆ ತಜ್ಞರನ್ನು ಕರೆಸಿಕೊಳ್ಳಲಾಗುತಿದೆ ಎಂದು ಡಾ.ಕರುಣಾಕರ ಅವರು ತಿಳಿಸಿದರು.
ಇದಕ್ಜೆ ಪ್ರತಿಕ್ರಿಯಿಸಿದ ಶಾಸಕಿ ಭಾಗೀರಥಿ ಮುರುಳ್ಯ ಖಾಯಂ ಪ್ರಸೂತಿ ತಜ್ಞರ ನೇಮಕಕ್ಕೆ ಸರಕಾರಕ್ಕೆ ಹಾಗೂ ಆರೋಗ್ಯ ಸಚಿವರಿಗೆ ಕೂಡಲೇ ಪತ್ರ ಬರೆಯುತ್ತೇನೆ. ಸಂಬಂಧಪಟ್ಟವರನ್ನು ಭೇಟಿ ಮಾಡಿ ವಾರದೊಳಗೆ ಪ್ರಸೂತಿ ತಜ್ಞರ ನೇಮಕ ಮಾಡಬೇಕು ಎಂದು ಒತ್ತಾಯಿಸುತ್ತೇನೆ ಎಂದರು. ವಿಧಾನಸಭೆಯ ಅಧಿವೇಶನದಲ್ಲಿಯೂ ಸಮಸ್ಯೆಯ ಬಗ್ಗೆ ಗಮನ ಸೆಳೆಯುತ್ತೇನೆ ಎಂದರು. ಹೊಸ ವೈದ್ಯರ ನೇಮಕ ಆಗುವ ತನಕ ರೋಗಿಗಳಿಗೆ, ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಎಲ್ಲರೂ ನಿಭಾಯಿಸಿಕೊಳ್ಳಿ ಎಂದು ಶಾಸಕರು ಸಲಹೆ ನೀಡಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ, ನಗರ ಪಂಚಾಯತ್ ಸದಸ್ಯರಾದ ವಿನಯಕುಮಾರ್ ಕಂದಡ್ಕ, ಬುದ್ಧ ನಾಯ್ಕ, ಪ್ರಮುಖರಾದ ಕೇಶವ ಮಾಸ್ತರ್ ಹೊಸಗದ್ದೆ, ಪ್ರಸಾದ್ ಕಾಟೂರು, ಶಿವಪ್ರಸಾದ್ ನಡುತೋಟ ಉಪಸ್ಥಿತರಿದ್ದರು.