ಸುಳ್ಯ: ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ಉದ್ಯೋಗ ಮೇಳ ‘ಎನ್ಎಂಸಿ ಟ್ಯಾಲೆಂಟ್ ಹೈರ್-2k24’ ಮೇ.28 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ.ಎಂ. ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವ ಹಾಗೂ ಪದವಿ ಪೂರೈಸಿರುವ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ವಿವಿಧ ಕಂಪನಿಗಳ
ಸಿಬ್ಬಂದಿಗಳು ಕಾಲೇಜಿಗೆ ಬಂದು ಸಂದರ್ಶನ ಮಾಡಿ ವಿವಿಧ ಹುದ್ದೆಗಳಿಗೆ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಎನ್ಎಂಸಿ ಟ್ಯಾಲೆಂಟ್ ಹೈರ್ ಏರ್ಪಡಿಸಲಾಗಿದ್ದು ಪ್ಲೇಸ್ಮೆಂಟ್ ಡ್ರೈವ್ ನಡೆಯಲಿದೆ. ಈ ಉದ್ಯೋಗ ಮೇಳವು ಬಿ.ಎ, ಬಿಎಸ್ಸಿ, ಬಿ.ಕಾಂ, ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ, ಬಿ.ಸಿ.ಎ ಪದವಿ ಪಡೆದ ಅಥವಾ ಅಂತಿಮ ಪದವಿಯಲ್ಲಿರುವ ವಿದ್ಯಾರ್ಥಿಗಳಿಗೆ, ಸ್ನಾತಕೋತ್ತರ ಪದವಿ ಪಡೆದ ಅಥವಾ ಪಿಯುಸಿ ಆದವರನ್ನು ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತಿದ್ದು ಅರ್ಹರು ಇದರ ಅನುಕೂಲವನ್ನು ಪಡೆದುಕೊಳ್ಳಬಹುದು ಎಂದರು. ಕ್ಯಾಂಪಸ್ ನೇಮಕಾತಿ ಬೆಳಗ್ಗೆ 9 ಕ್ಕೆ ಆರಂಭವಾಗಲಿದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ. ಉದ್ಘಾಟಿಸಲಿದ್ದಾರೆ ಎಂದು ಅವರು ವಿವರಿಸಿದರು.
ಈ ರೀತಿಯ ಉದ್ಯೋಗ ಮೇಳವನ್ನು ಕಾಲೇಜಿನಲಿ ಸತತ ಮೂರನೇ ವರ್ಷ ಆಯೋಜಿಸುತ್ತಿದ್ದೇವೆ, ಕಳೆದ ವರ್ಷ ಮಾಜಿ ಸಚಿವ ಎಸ್. ಅಂಗರರು ಪ್ರಾಯೋಜಿಸಿದ ಉದ್ಯೋಗ ಮೇಳದ ಅತಿಥ್ಯವನ್ನು ನೆಹರೂ ಮೆಮೋರಿಯಲ್ ಕಾಲೇಜು ವಹಿಸಿ 1724 ಮಂದಿ ಭಾಗವಹಿಸಿ 1128 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಈ ಬಾರಿ 22 ಕ್ಕಿಂತಲೂ ಹೆಚ್ಚು ಸಂಸ್ಥೆಗಳು ಸಂದರ್ಶನಕ್ಕಾಗಿ ಈಗಾಗಲೇ ನೋಂದಾಯಿಸಿದ್ದು ಇನ್ನೂ ಹೆಚ್ಚಿನ ಸಂಸ್ಥೆಗಳು ಭಾಗವಸುವ ನಿರೀಕ್ಷೆಯಿದೆ. ಸುಳ್ಯ, ಪುತ್ತೂರು, ಮಡಿಕೇರಿ ತಾಲೂಕುಗಳು ಹಾಗೂ ಸಮೀಪದ ಇನ್ನಿತರ ಗ್ರಾಮೀಣ ಭಾಗಗಳ ಆಕಾಂಕ್ಷಿತರಿಗೆ ಈ ಬಾರಿಯ ಉದ್ಯೋಗ ಮೇಳವೂ ಪ್ರಯೋಜನಕಾರಿ ಆಗಲಿದ್ದು ಹೆಚ್ಚು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಆಸಕ್ತರು ನೋಂದಾಯಿಸಿಕೊಳ್ಳಲು
https://docs.google.com/forms/d/e/1FAIpQLSfo3ioBJ 4 e.JEnTJvc-jBZ4paDxBC39bS5xZuMHRVsG480Ong/viewform ಲಿಂಕನ್ನು ಬಳಸಬಹುದು. ಉದ್ಯೋಗ ಮೇಳದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ನೆಹರೂ ಮೆಮೋರಿಯಲ್ ಕಾಲೇಜಿನ ಕಚೇರಿ (08257230331, 08257233331) ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಢಿಯಲ್ಲಿ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ.ಎಂ.ಬಾಲಚಂದ್ರ ಗೌಡ, ಕಾಲೇಜಿನ ಪ್ಲೇಸ್ಮೆಂಟ್ ಆಫೀಸರ್ ಭವ್ಯ.ಜಿ, ಉಪನ್ಯಾಸಕರಾದ ಕುಲದೀಪ್ ಪೆಲ್ತಡ್ಕ, ವಿಷ್ಣು ಪ್ರಶಾಂತ್, ಹರಿಪ್ರಸಾದ್ ಉಪಸ್ಥಿತರಿದ್ದರು.