ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಜಲಸಿರಿ ಅಧಿಕಾರಿಗಳ ಸಭೆಯನ್ನು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಕರೆದಿದ್ದರು. ಸಭೆ ನಡೆಯುತ್ತಿರುವ ವೇಳೆ ಅಲ್ಲಿಗೆ ಬಂದ
ತಹಶಿಲ್ದಾರ್ ಒಳಗೊಂಡ ಅಧಿಕಾರಿಗ ತಂಡ ನೀತಿ ಸಂಹಿತೆ ಸಡಿಲಿಕೆಯಾಗದ ಕಾರಣ ನೀವು ಸಭೆ ನಡೆಸುವಂತಿಲ್ಲ ಎಂದು ಸಭೆ ನಡೆಸದಂತೆ ತಿಳಿಸಿದ ಘಟನೆ ಮೇ.13 ರಂದು ನಡೆದಿದೆ. ನಗರಸಭಾ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ಸಮರ್ಪಕವಾದ ಕುಡಿಯುವ ನೀರಿಲ್ಲ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಶಾಸಕರು ಜಲಸಿರಿ ಅಧಿಕಾರಿಗಳ ಸಭೆಯನ್ನು ತನ್ನ ಕಚೇರಿಯಲ್ಲಿ ಕರೆದಿದ್ದರು. ಸಭೆ ಪ್ರಾರಂಭವಾಗಿ ಅರ್ಧ ತಾಸು ಬಳಿಕ ಸಭೆಗೆ ಆಗಮಿಸಿದ ಅಧಿಕಾರಿಗಳ ತಂಡ ಚುನಾವಣಾ ನೀತಿಸಂಹಿತೆ ಇರುವ ಕಾರಣ ಯಾವುದೇ ಸಭೆ ನಡೆಸುವಂತಿಲ್ಲ ಎಂದು ಶಾಸಕರಿಗೆ ಹೇಳಿದರು.
ನಾನು ಕಾನೂನಿಗೆ ಗೌರವ ಕೊಡುತ್ತೇನೆ. ನೀವು ಸಮಸ್ಯೆಗೆ ಸ್ಪಂದಿಸದೆ ಇರುವ ಕಾರಣ ನಾನು ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳ ಸಭೆಯನ್ನು ಕರೆದಿದ್ದೇನೆ. ನೀತಿ ಸಂಹಿತೆ ಇದೆ ಎಂದು ಜನರು ನೀರು ಕುಡಿಯದೆ ಇರ್ಲಿಕ್ಕೆ ಆಗ್ತದಾ? ಎಂದು ಪ್ರಶ್ನಿಸಿದ ಶಾಸಕರು ಚುನಾವಣೆ ಕಳೆದರೂ ಇಲ್ಲಿರುವ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದನೆ ನೀಡದೇ ಇದ್ದರೆ ಜನಪ್ರತಿನಿಧಿಯಾದ ನಾನು ಸಮಸ್ಯೆಗೆ ಸ್ಪಂದಿಸಬೇಕಾಗಿದ್ದು ನನ್ನ ಕರ್ತವ್ಯವಾಗಿದೆ. ನೀತಿಸಂಹಿತೆಗೆ ನಾನು ಗೌರವ ಕೊಡುತ್ತೇನೆ ಆದರೆ ಅದೇ ನೆಪ ಹೇಳಿ ಜನರಿಗೆ ಕುಡಿಯುವ ನೀರು ಕೊಡದೆ ಇರ್ಲಿಕ್ಕೆ ಆಗುವುದಿಲ್ಲ ಎಂದು ಹೇಳಿದ ಶಾಸಕರು ನಗರಸಭಾ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಕುಡಿಯುವ ನೀರು ತಲುಪಬೇಕು, ಗಾಳಿ ಮಳೆಗೆ ಹಾನಿಯಾದರೆ ತಕ್ಷಣ ವ್ಯವಸ್ಥೆ ಮಾಡಬೇಕು, ಗಂಜಿ ಕೇಂದ್ರ ತೆರೆದು ಜನರಿಗೆ ಅನ್ನ ಹಾಕಬೇಕು. ಎರಡು ದಿನದೊಳಗೆ ಈ ವ್ಯವಸ್ಥೆ ಮಾಡಬೇಕು. ನೀವು ಈ ವ್ಯವಸ್ಥೆ ಮಾಡದೇ ಇದ್ದರೆ ಸಂಬಂಧಪಟ್ಟ ಕಚೇರಿಯಲ್ಲಿ ನಾನು ಧರಣಿ ಕೂರಬೇಕಾಗುತ್ತದೆ ಎಂದು ತಿಳಿಸಿದರು.ನೀತಿ ಸಂಹಿತೆ ಸಡಿಲಿಕೆಯಾಗದ ಕಾರಣ ಕಚೇರಿಯೂ ತೆರೆಯುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿ ಶಾಸಕರ ಸರಕಾರಿ ಕಚೇರಿಯನ್ನು ಬಂದ್ ಮಾಡಿದ್ದಾರೆ.