ಸುಳ್ಯ:ಅರಣ್ಯ ಮತ್ತು ಕಂದಾಯ ಭೂಮಿ ಸಮಸ್ಯೆ ಹಾಗೂ ಗೊಂದಲಗಳನ್ನು ಪರಿಹರಿಸಲು ಜಂಟಿ ಸರ್ವೆ ನಡೆಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸುಳ್ಯಕ್ಕೆ ಆಗಮಿಸಿದ ಅವರು ಸುಳ್ಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ನೆರವೇರಿಸಿ, ಸುಳ್ಯ ನಗರ ಪಂಚಾಯತ್ನಲ್ಲಿ ನಗರ ಯೋಜನಾ ಪ್ರಾಧಿಕಾರ ಕಚೇರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಜಂಟಿ ಸರ್ವೆ ನಡೆಸಲು ಈ ಹಿಂದೆಯೇ
ಸೂಚನೆ ನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ವಿಳಂಬವಾಗಿದೆ. ಇದನ್ನು ಆದ್ಯತೆಯ ಮೇರೆಗೆ ಪೂರ್ತಿ ಮಾಡಲಾಗುವುದು ಎಂದು ಹೇಳಿದರು. ಕಂದಾಯ ಇಲಾಖೆ ಜನರಿಗೆ ಶೀಘ್ರ ಸ್ಪಂದನೆ ಮಾಡಬೇಕು, ಬಡವರ ಕೆಲಸವನ್ನು ಆದ್ಯತೆಯ ಮೇರೆಗೆ ಮಾಡಬೇಕು. ಅನವಶ್ಯಕ ವಿಳಂಬ ಮಾಡಬಾರದು ಎಂದು ಹೇಳಿದರು. ಕಂದಾಯ ಇಲಾಖೆಯ ಕೆಲಸ ಕಾರ್ಯಗಳ ಬಗ್ಗೆ ನಿರಂತರ ಪರಿಶೀಲನೆ ಮಾಡಲಾಗುವುದು. ಅಕ್ರಮ ಸಕ್ರಮ, 94ಸಿ ಕಡತ 11/9 ಅನ್ನು ಶೀಘ್ರ ಮಾಡಬೇಕು ಎಂದು ಸೂಚಿಸಿದರು. ಕಂದಾಯ ಇಲಾಖೆಯಲ್ಲಿ ಜನರ ಕೆಲಸಗಳಿಗೆ ಅನಗತ್ಯ ವಿಳಂಬ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಜನರಿಗೆ ಸಮರ್ಪಕವಾಗಿ ಮತ್ತು ಕಾನೂನು ರೀತಿಯಲ್ಲಿ

ಕೆಲಸ ಆಗಬೇಕು ಎಂದು ಹೇಳಿದರು. ಸರಕಾರಕ್ಕೆ ಅಭಿವೃದ್ಧಿಯಲ್ಲಿ ಯಾವುದೇ ತಾರತಮ್ಯ ಇಲ್ಲಾ ಎಂದ ಸಚಿವರು ಶಾಸಕರು, ನಗರ ಪಂಚಾಯತ್ ಅಧ್ಯಕ್ಷರು ಹಾಗೂ ಸಾರ್ವಜನಿಕರು ಮುಂದಿರಿಸಿದ ವಿವಿಧ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಲಾಗುವುದು, ಬೇಡಿಕೆಗಳ ಪ್ರಸ್ತಾವನೆಯನ್ನು ತಮ್ಮ ಕಚೇರಿಗೆ ಸಲ್ಲಿಸುವಂತೆ ಸಚಿವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಅಕ್ರಮ ಸಕ್ರಮ ಕಡತಗಳು, 94ಸಿ ಕಡತಗಳು ವಿಲೇವಾರಿ ಆಗುತ್ತಿಲ್ಲ, 9/11ಕಾನೂನು ಸರಳೀಕರಣ ಮಾಡಬೇಕು ಎಂದು ಹೇಳಿದರು.ಅಡಿಕೆ ಹಳದಿ ರೋಗದಿಂದ ಕೃಷಿ ಹಾನಿ ಸಂಭವಿಸಿದ ಕೃಷಿಕರಿಗೆ ಪರಿಹಾರಕ್ಕೆ ಪ್ರತ್ಯೇಕ ಪ್ಯಾಕೇಜ್ ನೀಡಬೇಕು, ರಸ್ತೆ ಅಭಿವೃದ್ಧಿಗೆ ಅಂಬೇಡ್ಕರ್ ಭವನ ಪೂರ್ತಿ ಮಾಡಲು ಅನುದಾನ ನೀಡಬೇಕು ಎಂದು ಹೇಳಿದರು.

ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮಾತನಾಡಿ ನಗರ ಪಂಚಾಯತ್ನಲ್ಲಿ ಸಿಬ್ಬಂದಿ ಕೊರತೆ, ಕಸ ಹಾಕಲು ಜಾಗದ ಕೊರತೆ ಸಮಸ್ಯೆ ಪರಿಹರಿಸಬೇಕು.ನಗರ ಪಂಚಾಯತ್ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು ಎಂದು ಬೇಡಿಕೆ ಇರಿಸಿದರು. ನಗರ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಸೇರಿ ವಿವಿಧ ಅಭಿವೃದ್ಧಿ ಬೇಡಿಕೆಗಳನ್ನು ಸಚಿವರಿಗೆ ನೀಡಿದರು. ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್,ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಪುತ್ತೂರು ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್, ಡಿಸಿಎಫ್ ಅಂಥೋನಿ ಮರಿಯಪ್ಪ, ತಹಶೀಲ್ದಾರ್ ಮಂಜುಳಾ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಮುಖಂಡರಾದ

ಧನಂಜಯ ಅಡ್ಪಂಗಾಯ, ಟಿ.ಎಂ.ಶಹೀದ್ ತೆಕ್ಕಿಲ್, ಜಿ.ಕೃಷ್ಣಪ್ಪ, ಪಿ.ಸಿ.ಜಯರಾಮ, ರಾಧಾಕೃಷ್ಣ ಬೊಳ್ಳೂರು, ನಿತ್ಯಾನಂದ ಮುಂಡೋಡಿ, ಪಿ.ಎಸ್.ಗಂಗಾಧರ, ಗೀತಾ ಕೋಲ್ಚಾರ್,ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ,ನಗರ ಪಂಚಾಯತ್ ಉಪಾಧ್ಯಕ್ಷ ಬುದ್ದ ನಾಯ್ಕ್ , ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ , ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ, ಸದಸ್ಯರಾದ ಎಂ ವೆಂಕಪ್ಪ ಗೌಡ , ರಾಜು ಪಂಡಿತ್ , ಡೇವಿಡ್ ಧೀರಾ ಕ್ರಾಸ್ತ , ಕೆ.ಎಸ್.ಉಮ್ಮರ್, ಶೀಲಾ ಅರುಣ ಕುರುಂಜಿ, ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ, ರಿಯಾಝ್ ಕಟ್ಟೆಕ್ಕಾರ್, ಭಾಸ್ಕರ ಪೂಜಾರಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ನ.ಪಂ ಮುಖ್ಯಾಧಿಕಾರಿ ಸುಧಾಕರ ಎಂ ಹೆಚ್ ವಂದಿಸಿದರು.ಸಚಿವರು ಸುಳ್ಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದರು.
ಸುಳ್ಯ ತಾಲೂಕು ಪಂಚಾಯತ್ ರಾಜ್ಯ ಇಂಜಿನಿಯರಿಂಗ್ ಉಪ ವಿಭಾಗದ ನೂತನ ಕಚೇರಿ ಕಟ್ಟಡ ಉದ್ಘಾಟನೆ ನೆರವೇರಿಸಿದ ಅವರು ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಬ್ಲಾಕ್ ಪಬ್ಲಿಕ್ ಹೆಲ್ತ್ ಲ್ಯಾಬ್ ಮತ್ತು ನೂತನ ಶವಗಾರ ಉದ್ಘಾಟನೆ ನೆರವೇರಿಸಿದರು. ಬಳಿಕ ಅರಂಬೂರಿನ ಸಾಮಾಜಿಕ ವಲಯ ಅರಣ್ಯಾಧಿಕಾರಿಗಳ ಕಚೇರಿ ಕಟ್ಟಡ ಉದ್ಘಾಟನೆ ನೆರವೇರಿಸಿದರು.