ಪೆರುವಾಜೆ : ಸುಳ್ಯ, ಪುತ್ತೂರು ಹಾಗೂ ಕಡಬ ತಾಲೂಕಿನ 21 ಗ್ರಾಮಗಳ ಮಾಗಣೆ ಕ್ಷೇತ್ರವಾಗಿರುವ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನವು ಜಾತ್ರೆ, ನವರಾತ್ರಿಯ ವಿಶಿಷ್ಟ ಆಚರಣೆಗಳಿಗೆ ಮಾತ್ರವಲ್ಲದೇ, ಆಷಾಢ ಮಾಸದಲ್ಲಿಯೂ ತನ್ನದೇ ಆದ ಅಪರೂಪದ ಧಾರ್ಮಿಕ ಸಂಪ್ರದಾಯವನ್ನು ಉಳಿಸಿಕೊಂಡಿದೆ. ಪ್ರತಿವರ್ಷ ಆಷಾಢ ಮಾಸದಲ್ಲಿ 48 ದಿನಗಳ ಕಾಲ ನಿರಂತರವಾಗಿ
ಶ್ರೀ ಗಣಪತಿ ಹೋಮ ಹಾಗೂ ಶ್ರೀ ದುರ್ಗಾಪೂಜೆ ನಡೆಸಲಾಗುತ್ತಿದ್ದು, ವಿವಿಧ ಭಾಗಗಳಿಂದ ಆಗಮಿಸುವ ಭಕ್ತರು ಈ ಸೇವೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಈ ವರ್ಷ ಜುಲೈ 17ರಿಂದ ಸೆಪ್ಟೆಂಬರ್ 2ರವರೆಗೆ ನಡೆಯುತ್ತಿರುವ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪ್ರತಿದಿನ ಉದ್ಭವ ಶ್ರೀ ಜಲದುರ್ಗಾದೇವಿ ಹಾಗೂ ಉದ್ಭವ ಶ್ರೀ ಮಹಾಗಣಪತಿಗೆ ವಿಶೇಷ ಹೋಮ, ಪೂಜೆ, ಅಲಂಕಾರ ಹಾಗೂ ಆರಾಧನೆ ನೆರವೇರುತ್ತಿದೆ. ಆಷಾಢ ಮಾಸದಲ್ಲಿ ದೇವಿ ಹಾಗೂ ಗಣಪತಿಯ ಆರಾಧನೆಗೆ ವಿಶೇಷ ಮಹತ್ವವಿದ್ದು, ಈ ಸೇವೆಯಲ್ಲಿ ಭಕ್ತಿಯಿಂದ ಪಾಲ್ಗೊಂಡರೆ ಇಷ್ಟಾರ್ಥ ಸಿದ್ಧಿ, ಆರೋಗ್ಯ, ಕುಟುಂಬದ ಕ್ಷೇಮ ಹಾಗೂ ನೆಮ್ಮದಿ ದೊರೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಪೆರುವಾಜೆ ಶ್ರೀಕ್ಷೇತ್ರದ ಅತ್ಯಂತ ಅಪರೂಪದ ವೈಶಿಷ್ಟ್ಯವೆಂದರೆ ಉದ್ಭವ ಶ್ರೀ ಜಲದುರ್ಗಾದೇವಿ ಹಾಗೂ ಉದ್ಭವ ಶ್ರೀ ಮಹಾಗಣಪತಿ ಸಾನಿಧ್ಯ. ಎರಡೂ ದೇವತಾ ಸಾನಿಧ್ಯಗಳು ಉದ್ಭವ ರೂಪದಲ್ಲಿ ಗೋಚರಿಸಿರುವುದು ಕ್ಷೇತ್ರದ ಮಹಿಮೆಯಾಗಿದೆ. ಆಷಾಢ ಮಾಸದ 48 ದಿನಗಳ ವಿಶೇಷ ಆರಾಧನೆಯಲ್ಲಿ ಎರಡೂ ದೇವತೆಗಳಿಗೆ ಸಮಾನ ಮಹತ್ವ ನೀಡಿ ಶ್ರೀ ಗಣಪತಿ ಹೋಮ ಹಾಗೂ ಶ್ರೀ ದುರ್ಗಾಪೂಜೆ ನೆರವೇರಿಸಲಾಗುತ್ತದೆ.
48 ದಿನಗಳ ವಿಶೇಷ ಪೂಜೆಯಲ್ಲಿ

ಭಕ್ತರು ತಮ್ಮ ಹೆಸರಿನಲ್ಲಿ ಶ್ರೀ ಗಣಪತಿ ಹೋಮ ಹಾಗೂ ಶ್ರೀ ದುರ್ಗಾಪೂಜೆ ನಡೆಸಿಸಬಹುದಾಗಿದೆ. ರೂ.300 ಸೇವಾಶುಲ್ಕ ನೀಡಿ ಮುಂಚಿತವಾಗಿ ರಶೀದಿ ಪಡೆದು ಸೇವಾ ದಿನವನ್ನು ನಿಗದಿಪಡಿಸಬಹುದಾಗಿದೆ. ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಪ್ರತಿ ವರ್ಷ ಮನೆಮನೆಯ ಬಲಿವಾಡು ಸಮರ್ಪಣೆ, 10 ಅಥವಾ 11 ದಿನಗಳ ವಿಶಿಷ್ಟ ನವರಾತ್ರಿ ಆಚರಣೆ, ಮಲ್ಲಿಗೆ ಶಯನೋತ್ಸವ ಸೇರಿದಂತೆ ಅನೇಕ ಅಪರೂಪದ ಸಂಪ್ರದಾಯಗಳಿಂದ ಸಾವಿರಾರು ಭಕ್ತರನ್ನು ಸೆಳೆಯುವ ಪೆರುವಾಜೆ ಶ್ರೀ ಜಲದುರ್ಗಾದೇವಿ ಕ್ಷೇತ್ರದಲ್ಲಿ, ಆಷಾಢದ 48 ದಿನಗಳ ವಿಶೇಷ ಪೂಜೆಗಳು ನವರಾತ್ರಿ ಮಹೋತ್ಸವಕ್ಕೆ ಮುನ್ನುಡಿಯಾಗಿವೆ.
‘ಸತತ 48 ದಿನಗಳ ಕಾಲ ಶ್ರೀ ಗಣಪತಿ ಹೋಮ ಹಾಗೂ ಶ್ರೀ ದುರ್ಗಾಪೂಜೆ ನಡೆಯುವುದು ಈ ಕ್ಷೇತ್ರದ ಅಪರೂಪದ ವೈಶಿಷ್ಟ್ಯವಾಗಿದೆ.ಈ ಸೇವೆಯಲ್ಲಿ ಭಕ್ತಿಯಿಂದ ಭಾಗವಹಿಸಿದವರಿಗೆ ಇಷ್ಟಾರ್ಥ ಸಿದ್ಧಿ, ಕುಟುಂಬದ ಕ್ಷೇಮ ಹಾಗೂ ನೆಮ್ಮದಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.’
-ಸುನಿಲ್ ಕುಮಾರ್ ರೈ ಪೆರುವಾಜೆ
ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ
ಶ್ರೀ ಜಲದುರ್ಗಾದೇವಿ ದೇವಸ್ಥಾನ.












