ಪ್ಯಾರಿಸ್: ಒಂದೇ ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತದ ಮನು ಭಾಕರ್ ಈಗ ಮೂರನೇ ಪದಕ ಗೆಲ್ಲುವತ್ತ ಗುರಿಯಿಟ್ಟಿದ್ದಾರೆ.ಶುಕ್ರವಾರ ನಡೆದ 25 ಮೀ ಸ್ಪೋರ್ಟ್ಸ್ ಪಿಸ್ತೂಲ್ ವಿಭಾಗದಲ್ಲಿ ಅವರು ಪದಕ ಸುತ್ತಿಗೆ ಅರ್ಹತೆ ಗಿಟ್ಟಿಸಿದರು. 22 ವರ್ಷದ ಮನು ಶನಿವಾರ ನಡೆಯಲಿರುವ ಫೈನಲ್ ಸುತ್ತಿನಲ್ಲಿ
ಕಣಕ್ಕಿಳಿಯಲಿದ್ದಾರೆ.ಈ ಒಲಿಂಪಿಕ್ಸ್ನಲ್ಲಿ ಮನು ಅವರು 10 ಮೀ ಏರ್ ಪಿಸ್ತೂಲ್ ಮತ್ತು 10 ಮೀ ಏರ್ ಪಿಸ್ತೂಲ್ ಮಿಶ್ರ (ಸರಬ್ಜೋತ್ಸಿಂಗ್ ಜೊತೆಗೂಡಿ) ತಂಡ ವಿಭಾಗಗಳಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಒಂದೇ ಒಲಿಂಪಿಕ್ ಕೂಟದಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟುವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.25 ಮೀ ಏರ್ ಪಿಸ್ತೂಲ್ ವಿಭಾಗದ ಸ್ಪರ್ಧೆಯು ಅವರಿಗೆ ಅತ್ಯಂತ ನೆಚ್ಚಿನದ್ದು. ಈ ಹಿಂದೆ ನಡೆದ ಅಂತರರಾಷ್ಟ್ರೀಯ ಚಾಂಪಿಯನ್ಷಿಪ್ಗಳಲ್ಲಿ ಈ ವಿಭಾಗಗಳಲ್ಲಿ ಅವರು ಉತ್ತಮ ಸಾಧನೆ ಮಾಡಿದ್ದಾರೆ. ಇಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿಯೂ ಅವರು ಶಿಸ್ತುಬದ್ಧ ಮತ್ತು ನಿಖರವಾದ ಗುರಿ ಸಾಧಿಸಿದರು. ಒಟ್ಟು 590 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು. ಹಂಗೆರಿ ವೆರೋನಿಕಾ ಮೇಜರ್ (592)ಮೊದಲ ಸ್ಥಾನ ಗಳಿಸಿದರು.
ಭಾರತದ ಶೂಟರ್ ಇಶಾ ಸಿಂಗ್ 581 ಅಂಕ ಗಳಿಸಿದರು. ಅದರೊಂದಿಗೆ 18ನೇ ಸ್ಥಾನ ಪಡೆದರು. ಅರ್ಹತಾ ಸುತ್ತಿನಲ್ಲಿ ಒಟ್ಟು 40 ಸ್ಪರ್ಧಿಗಳು ಕಣದಲ್ಲಿದ್ದರು.