ಕೂರ್ನಡ್ಕ:ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೂರ್ನಡ್ಕ ಹಾಗೂ ಕೊಡಗಿನ ಪೆರಾಜೆಯ ಸಂಪರ್ಕ ಸೇರಿದಂತೆ ಮೂರು ಜಿಲ್ಲೆಗಳ ಸಂಪರ್ಕ ಸೇತುವಾದ ಕೂರ್ನಡ್ಕದ ಮುಳುಗು ಸೇತುವೆ ಇದೀಗ ಶಿಥಿಲಗೊಂಡಿದೆ. ಭಾರೀ ಮಳೆಗೆ ಸೇತುವೆಗೆ ಹಾನಿಯಾಗಿದ್ದು ಇನ್ನಷ್ಟು ಶಿಥಿಲಗೊಂಡಿದೆ. ಮೊನ್ನೆ ತಾನೆ ಮಳೆಗೆ ಮುಳುಗು ಸೇತುವೆಗೆ ಹಾನಿಯಾಗಿದೆ. ಇದೀಗ ಸೇತುವೆಯಲ್ಲಿ

ಸಿಲುಕಿದ ಕಸ ಕಡ್ಡಿಗಳನ್ನು ತೆರವು ಮಾಡಿ ಸ್ಥಳೀಯರು ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದಾರೆ. ಇಲ್ಲಿಗೆ ಸರ್ವ ಋತು ಸೇತುವೆ ನಿರ್ಮಾಣ ಆಗಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಮೂರು ಜಿಲ್ಲೆಗಳ ಸಂಪರ್ಕ ಕಲ್ಪಿಸುವ ಕೂರ್ನಡ್ಕ ಹೊಳೆಗೆ ಸೇತುವೆ ನಿರ್ಮಾಣ ಆಗಬೇಕು ಎಂಬ ಬೇಡಿಕೆಗೆ ದಶಕಗಳೇ ಸಂದಿದೆ. ಮಳೆಗಾಲದಲ್ಲಿ ಹೊಳೆ ತುಂಬಿ ಹರಿದರೆ ಸಂಪರ್ಕ ಕಡಿತಗೊಳ್ಳುತ್ತದೆ.ಇದರಿಂದ ಜನರಿಗೆ ಸಂಪರ್ಕ ಸಮಸ್ಯೆ ಎದುರಾಗುತ್ತದೆ. ದಕ್ಷಿಣ ಕನ್ನಡದ ಆಲೆಟ್ಟಿ, ಕೊಡಗಿನ ಪೆರಾಜೆ ಹಾಗೂ ಕಾಸರಗೋಡಿನ ಪನತ್ತಡಿ ಪಂಚಾಯತ್ನ ಕಲ್ಲಪಳ್ಳಿ, ಕಮ್ಮಾಡಿ ಪ್ರದೇಶಗಳನ್ನು ಸಂಪರ್ಕಿಸುವ ಈ ರಸ್ತೆ ಮತ್ತು ಸೇತುವೆಯಲ್ಲಿ ಶಾಲಾ

ವಾಹನಗಳು ಸೇರಿ ನೂರಕ್ಕೂ ಅಧಿಕ ವಾಹನಗಳು ದಿನವೂ ಓಡಾಡುತ್ತವೆ. ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ನೂರಾರು ಮಂದಿಗೆ ಆಶ್ರಯ ಈ ಸೇತುವೆ. ಆಲೆಟ್ಟಿ, ಬಡ್ಡಡ್ಕ, ಕಲ್ಲಪಳ್ಳಿ, ಕಮ್ಮಾಡಿ ಭಾಗದಿಂದ ಹಾಗೂ ಪೆರಾಜೆ ಭಾಗದಿಂದ ಸಂಚಾರಕ್ಕೆ ಅತೀ ಅಗತ್ಯವಾದ ಸೇತುವೆ ಇದು ಎಂದು ಸ್ಥಳೀಯರು ಹೇಳುತ್ತಾರೆ.
ನಾಲ್ಕು ದಶಕಗಳ ಹಿಂದೆ ಸ್ಥಳೀಯರು ಸೇರಿ ಖರ್ಚು ಮಾಡಿ ನಿರ್ಮಿಸಿದ ಈ ಮುಳುಗು ಸೇತುವೆ ಈಗ ಸಂಪೂರ್ಣ ಶಿಥಿಲಗೊಂಡಿದೆ. ಭಾರೀ ಮಳೆಗೆ ಧುಮುಕಿ ಬಂದ ನೆರೆ ನೀರಿನಿಂದ ಸೇತುವೆಗೆ ಹಾನಿ ಸಂಭವಿಸಿದೆ. ಇದೀಗ ಹೊಸ ಸೇತುವೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಗೆ ಇನ್ನಷ್ಟು ಬಲ ಬಂದಿದೆ. ಈ ಹಿಂದೆ ಶಾಸಕರಿಗೆ ಹಾಗೂ ಸಂಸದರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಭರವಸೆ ಮಾತ್ರ ಸಿಕ್ಕಿದೆ ಎಂಬುದು ಸ್ಥಳೀಯರು ಹೇಳಿದ್ದಾರೆ.