ಸುಳ್ಯ:ಕಸ್ತೂರಿ ರಂಗನ್ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಲು ಒಪ್ಪದ ಕರ್ನಾಟಕ ಸರ್ಕಾರದ ನಿರ್ಣಯ ಐತಿಹಾಸಿಕವಾದುದು. ಈ ನಿರ್ಣಯವನ್ನು ಯುವ ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಹೇಳಿದ್ದಾರೆ.ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿಗಾಗಿ ಏಳನೇ ಬಾರಿಗೆ ಅಧಿಸೂಚನೆ ಹೊರಡಿಸಿದ್ದರ ಪರಿಣಾಮವಾಗಿ ಆತಂಕಗೊಂಡಿದ್ದ ರಾಜ್ಯದ ಜನರ
ಪರವಾಗಿ ಎಲ್ಲಾ ಪಕ್ಷಗಳು, ಎಲ್ಲಾ ಜನಪ್ರತಿನಿಧಿಗಳು ಮತ್ತು ಎಲ್ಲಾ ಪಕ್ಷಗಳ ಕಾರ್ಯಕರ್ತರು, ಹೋರಾಟಗಾರರ ಕೂಗು ಆಲಿಸಿ ಕರ್ನಾಟಕ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ಕರೆದು ಸರ್ವ ಪಕ್ಷಗಳ ಶಾಸಕರುಗಳ ಸಮ್ಮುಖದಲ್ಲಿ ಒಕ್ಕೊರಲಿನ ನಿರ್ಣಯ ಮಂಡಿಸಿ, ರಾಜ್ಯದ ಸ್ಪಷ್ಟ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 100 ದಿನಗಳಲ್ಲೇ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿಗೆ ಹೊರಡಿಸಿದ್ದ ಏಳನೇ ಅಧಿಸೂಚನೆ ವಿರೋಧಿಸಿ ಹೋರಾಟ ನಡೆಸಿದ ನಮ್ಮೆಲ್ಲರ ಹೋರಾಟಕ್ಕೆ, ನಮ್ಮ ಅಹವಾಲುಗಳಿಗೆ ಸ್ಪಂದಿಸಿದ ಮುಖ್ಯಮಂತ್ರಿ ಹಾಗು ಸರಕಾರ ಬದುಕಿಗೆ ಭರವಸೆ ಮೂಡಿಸಿದ್ದಾರೆ ಎಂದು ಚೇತನ್ ಕಜೆಗದ್ದೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.







