ಸುಳ್ಯ:ಹವಾಮಾನ ಆಧಾರಿತ ಬೆಳೆವಿಮೆಯಲ್ಲಿ ಕೇಂದ್ರ ಸರಕಾರಕ್ಕಿಂತ ರಾಜ್ಯ ಸರಕಾರದ ಹೆಚ್ಚು ಪಾಲು ನೀಡುತಿದೆ. ಕೇಂದ್ರ ಸರಕಾರ ಶೇ.10 ಪ್ರೀಮಿಯಂ ಪಾಲು ನೀಡಿದರೆ ರಾಜ್ಯ ಸರಕಾರ ಶೇ.20 ಪಾಲು ನೀಡಿದೆ. ಆದರೆ ಬೆಳೆ ವಿಮೆಯ ಹೆಸರಲ್ಲಿ ಕಾಂಗ್ರೆಸ್ ಯಾವತ್ತೂ ರಾಜಕೀಯ ಲಾಭ ಮಾಡಲು ಪ್ರಯತ್ನಿಸಿಲ್ಲ. ಆದರೆ ಬಿಜೆಪಿಯವರು ಇದು ಕೇಂದ್ರ ಸರಕಾರದ ಯೋಜನೆ ಎಂದು
ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದೆ. ಇದೀಗ ವಿಮೆ ಪರಿಹಾರ ಮೊತ್ತ ಕಡಿಮೆಯಾದಾಗ ರಾಜ್ಯ ಸರಕಾರವನ್ನು ದೂರುವ ಕೆಲಸ ಮಾಡುತಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಸಾಲಿನಲ್ಲಿ ರಾಜ್ಯ ಸರಕಾರವು ಅಡಿಕೆ ಬೆಳೆಗೆ ಶೇ.20 ರಷ್ಟು ವಿಮಾ ಪರಿಹಾರವನ್ನು ನೀಡುತ್ತಿದ್ದು ಈ ಹಿಂದೆ ಹಲವಾರು ವಾರ್ಷಿಕ ಸಾಲಿನಲ್ಲಿ ಇದಕ್ಕಿಂತ ಹೆಚ್ಚಿನ ವಿಮಾ ಮೊತ್ತವನ್ನು ರಾಜ್ಯ ಸರಕಾರ ಭರಿಸಿರುತ್ತದೆ. ಕೇಂದ್ರ ಸರಕಾರ ಈವರೆಗೂ ಶೇಕಡಾ 10 ಕ್ಕಿಂತ ಜಾಸ್ತಿ ಪಾಲನ್ನು ನೀಡಿಲ್ಲ.ರಾಜ್ಯ ಸರಕಾರದ ಪಾಲು ಜಾಸ್ತಿ ಇರುವುದರಿಂದ
ರಾಜ್ಯದ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಫೋಟೋ ಇರುವ ಪ್ಲೆಕ್ಸ್ ಅಳವಡಿಸುವಂತೆ ಸರಕಾರವನ್ನು ಆಗ್ರಹಿಸುತ್ತೇವೆ ಎಂದು ಅವರು ಹೇಳಿದರು. ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ 2016-17 ರಿಂದ ಅನುಷ್ಠಾನಗೊಳಿಸಲಾಗಿತ್ತು. ಇದರಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಳನ್ನು ಒಳಗೊಂಡಿತ್ತು.ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಸಮಿತಿಯ ಈ ಬೆಳೆ ವಿಮೆಗೆ ಸಂಬಂಧಪಟ್ಟಂತೆ ಟರ್ಮ್ ಶೀಟನ್ನು ತಯಾರಿಸಿ ರಾಜ್ಯ ಸಮಿತಿಗೆ ಅನುಮೋದನೆಗೆ ಕಳುಹಿಸಲಾತ್ತದೆ. ಬೆಳೆ ನಷ್ಟವನ್ನು ಅನುಮೋದಿತ ಟರ್ಮ್ ಶೀಟ್ ಪ್ರಕಾರ ಬೆಳೆ ವಿಮಾ ನಷ್ಟ ಪರಿಹಾರವನ್ನು ಲೆಕ್ಕಾಚಾರ ಮಾಡಿ ವಿಮಾ ಸಂಸ್ಥೆಗಳು ರೈತರ ಖಾತೆಗೆ ವಿಮಾ ಪರಿಹಾರ ಮೊತ್ತವನ್ನು ಪಾವತಿಸುತ್ತವೆ.
2022-23ರವರೆಗೆ ಟರ್ಮ್ ಶೀಟ್ನಲ್ಲಿ 4 ತಿಂಗಳ ಸರಾಸರಿ 100 ಮಿ.ಮಿ ಗಿಂತ ಹೆಚ್ಚು ಮಳೆ ಬಂದರೆ ಪರಿಹಾರ ಪಾವತಿ ಎಂದಾಗಿತ್ತು. ದ.ಕ.ಜಿಲ್ಲೆಯಲ್ಲಿ ಸಾಮಾನ್ಯ ಮಳೆ ಪ್ರಮಾಣ 225 ಆಗಿರುತ್ತದೆ. ಟರ್ಮ್ ಶೀಟ್ನಲ್ಲಿ 100 ಮಿ.ಮಿ. ಇದ್ದರಿಂದ ರೈತರಿಗೆ ವಿಮಾ ಪರಿಹಾರ ಮೊತ್ತವು ಜಾಸ್ತಿಯಾಗುತ್ತಿದೆ ಇದರಿಂದ ನಮಗೆ ನಷ್ಟ ಉಂಟಾಗುತ್ತಿದೆ ಎಂದು ವಿಮಾ ಕಂಪೆನಿಗಳು ಟೆಂಡರ್ ಹಾಕಲು ಹಿಂದೇಟು ಹಾಕಿದ್ದರು. ಇದರಿಂದ ಬೆಳೆ ವಿಮಾ ಯೋಜನೆಯ ಪ್ರಯೋಜನ ಸಿಗದೆ ತೊಂದರೆಯಾಗುವುದನ್ನು ಮನಗಂಡು ಟರ್ಮ್ ಶೀಟನ್ನು 2023-24ನೇ ಸಾಲಿನಿಂದ ಮಾರ್ಪಾಡು ಮಾಡಲಾಗಿದೆ. ದ.ಕ. ಜಿಲ್ಲೆಯಲ್ಲಿ ಸಾಮಾನ್ಯ ಮಳೆ ಪ್ರಮಾಣ 225 ಮಿ.ಮೀ ಆಗಿರುವುದರಿಂದ ಮತ್ತು ವಿಮಾ ಕಂಪೆನಿಯಿಂದ ಟರ್ಮ್ ಶೀಟ್ನ್ನು ಮಾರ್ಪಾಡು ಮಾಡುವ ಬೇಡಿಕೆ ಇದ್ದುದರಿಂದ ಜಿಲ್ಲಾ ಸಮಿತಿಯೂ ಟರ್ಮ್ ಶೀಟನ್ನು ಮಾರ್ಪಾಡು ಮಾಡಿ, ರಾಜ್ಯ ಸಮಿತಿಯ ಅನುಮೋದನೆಗೆ ಸಲ್ಲಿಸಿದ ಮೇರೆಗೆ ಹೊಸ ಟರ್ಮ್ ಶೀಟ್ನ್ನು ಮಾಡಿರುತ್ತದೆ. ಈ ಎಲ್ಲಾ ಪ್ರೋಸೆಸ್ ಕೇಂದ್ರ ಸರಕಾರದ ಮಾರ್ಗಸೂಚಿಯನ್ವಯ ನಡೆಸಲಾಗಿರುತ್ತದೆ. ಹೊಸ ಟರ್ಮ್ ಶೀಟ್ನಲ್ಲಿ 10 ತಿಂಗಳು ಮಳೆ 2 ತಿಂಗಳೂ ತಾಪಮಾನದ ಮಿತಿಯನ್ನು ಅಳವಡಿಸಿ ಪೂರ್ಣ ಒಂದು ವರ್ಷ ಕವರೇಜ್ ನೀಡಿ ರೈತರಿಗೆ ಅನುಕೂಲ ಮಾಡಲಾಗಿದೆ.ಟರ್ಮ್ ಶೀಟ್ ಬದಲಾವಣೆಗೂ ರಾಜ್ಯ ಸರಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಮಹಮ್ಮದ್ ಆಲಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಅಂಬೆಕಲ್ಲು, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಅಬ್ದುಲ್ ಗಫೂರ್ ಕಲ್ಮಡ್ಕ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಕರುಣಾಕರ ಅಡ್ಪಂಗಾಯ, ನಂದರಾಜ ಸಂಕೇಶ ಉಪಸ್ಥಿತರಿದ್ದರು.










