ಸುಳ್ಯ:ಇಂದು ಬೆಳಿಗ್ಗೆ ನಿಧನರಾದ ತೂಗು ಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್(76) ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಸಕಲ ಸರಕಾರಿ ಗೌರವಗಳೊಂದಿಗೆ ನಡೆಯಿತು. ಅರಂಬೂರಿನ ಮನೆಯಲ್ಲಿ ವಿವಿಧ ವಿಧಿ ವಿಧಾನಗಳು ನಡೆದು ಸರಕಾರಿ ಗೌರವ ಸಲ್ಲಿಸಿದ ಬಳಿಕ
ಸಂಜೆ ಅಂತ್ಯ ಸಂಸ್ಕಾರ ನಡೆಯಿತು. ಪೊಲೀಸರು ಗೌರವ ವಂದನೆ ಸಲ್ಲಿಸಿ ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ಸಲ್ಲಿಸಿದರು. ದ.ಕ.ಜಿಲ್ಲಾಧಿಕಾರಿ ಹೆಚ್.ವಿ.ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್, ತಹಶೀಲ್ದಾರ್ ಎಂ.ಮಂಜುಳ ಅಂತಿಮ ನಮನ ಸಲ್ಲಿಸಿದರು.

ಶಾಸಕಿ ಭಾಗೀರಥಿ ಮುರುಳ್ಯ, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಪುತ್ತೂರು ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್, ಮಾಜಿ ಸಚಿವ ಎಸ್.ಅಂಗಾರ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಡಾ.ಪ್ರಭಾಕರ ಭಟ್ ಕಲ್ಲಡ್ಕ ಸೇರಿದಂತೆ ಸಾವಿರಾರು ಮಂದಿ ಆಗಮಿಸಿ ಅಂತಿಮ ದರ್ಶನ ಪಡೆದರು.
ದುಃಖ ಸೂಚಕವಾಗಿ ಸುಳ್ಯ ನಗರದ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಗೌರವ ಸಲ್ಲಿಸಿದರು.







