ಸುಳ್ಯ:ಸುಳ್ಯದ ಕಾರಣಿಕ ಕ್ಷೇತ್ರ ಶ್ರೀ ಕಲ್ಕುಡ ದೈವಸ್ಥಾನದಲ್ಲಿ
ಪುನರ್ ಪ್ರತಿಷ್ಠಾ ಕಲಶೋತ್ಸವ ಜೂ.15 ರಿಂದ 18ರ ನಡೆಯಲಿದೆ.ನವೀಕೃತ ಶಿಲಾಮಯ ಗುಡಿಯಲ್ಲಿ ಶ್ರೀ ಕಲ್ಕುಡ, ಕಲ್ಲುರ್ಟಿ ಹಾಗು ಗುಳಿಗ ದೈವದ ಕಟ್ಟೆಯಲ್ಲಿ ಪುನರ್ ಪ್ರತಿಷ್ಠಾ ಕಲಶೋತ್ಸವ ವಿವಿಧ ವೈದಿಕ ಹಾಗು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೈವಸ್ಥಾನದ ಜೀರ್ಣೊದ್ಧಾರ ಹಾಗು ಆಡಳಿತ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಹಾಗು ಆಡಳಿತ ಧರ್ಮದರ್ಶಿ ಪಿ.ಕೆ.ಉಮೇಶ್ ಕಾರ್ಯಕ್ರಮದ ವಿವರ ನೀಡಿ ಸುಳ್ಯದ ಪುರದೊಡೆಯ
ಶ್ರೀ ಚೆನ್ನಕೇಶವ ದೇವರ ರಥೋತ್ಸವದ ರಕ್ಷಕನಾಗಿ ಸುಮಾರು 300 ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿರುವ ಶ್ರೀ ಕಲ್ಕುಡ- ಕಲ್ಲುರ್ಟಿ ದೈವಗಳಿಗೆ ನೂತನ ಶಿಲಾಮಯ ಗುಡಿ ನಿರ್ಮಿಸಿ, ಗುಳಿಗ ದೈವಕ್ಕೆ ಕಟ್ಟೆ ನಿರ್ಮಿಸಲಾಗಿದೆ.ಸುಮಾರು 300 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಕಲ್ಕುಡ-ಕಲ್ಲುರ್ಟಿ-ಗುಳಿಗ ದೈವಗಳು ಇದ್ದು, ಸಂಪೂರ್ಣವಾಗಿ ನಶಿಸಿ ಹೋಗಿದ್ದ ದೈವಸ್ಥಾನವನ್ನು 1985ರ ಅಂತ್ಯದಲ್ಲಿ ಪುನರ್ ನಿರ್ಮಾಣ ಮಾಡಲಾಯಿತು.
ಅಂದಿನಿಂದ ದೈವಗಳಿಗೆ ನೇಮೋತ್ಸವ, ತಂಬಿಲ ಸೇವೆ ಹಾಗೂ ಸಂಕ್ರಮಣ ಪೂಜೆಗಳನ್ನು ನಿಯಮಿತವಾಗಿ ನಡೆಸಿಕೊಂಡು ಕ್ಷೇತ್ರವನ್ನು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಬೆಳೆಸಿಕೊಂಡು ಬಂದಿದ್ದೇವೆ.
ಇತ್ತೀಚೆಗೆ ಸ್ಥಳದ ಮತ್ತು ದೈವಗಳ ಬಗ್ಗೆ ಪ್ರಶ್ನಾಚಿಂತನೆ ಇಟ್ಟಾಗ ದೈವಗಳಿಗೆ ನೂತನ ಶಿಲಾಮಯ ಗುಡಿ ನಿರ್ಮಿಸಬೇಕೆಂಬ ಚಿಂತನೆ ಮೂಡಿ ಬಂದು ಆ ಪ್ರಕಾರ ತಂತ್ರಿಗಳಾದ ದೇಲಂಪಾಡಿಯ ಬ್ರಹ್ಮಶ್ರೀ ವೇ.ಮೂ ಗಣೇಶ ತಂತ್ರಿಯವರ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತ್ರವರ ನೇತೃತ್ವದಲ್ಲಿ ಶ್ರೀ ದೈವಗಳಿಗೆ ಶಿಲಾಮಯ ಗುಡಿ ಮತ್ತು ಗುಳಿಗ ದೈವಕ್ಕೆ ನೂತನ ಕಟ್ಟೆಯನ್ನು ನಿರ್ಮಿಸಲಾಗಿರುತ್ತದೆ.
ಈ ಎಲ್ಲಾ ಜೀರ್ಣೋದ್ಧಾರದ ಕಾಮಗಾರಿಗಳು ಶಂಕು ಸ್ಥಾಪನೆಯಿಂದ ಪ್ರಾರಂಭಿಸಿ ಕೇವಲ 64 ದಿನಗಳೊಳಗೆ ಪೂರೈಸಿಕೊಂಡು ಈದೀಗ ಪುನರ್ ಪ್ರತಿಷ್ಠಾ ಕಲಶೋತ್ಸವಕ್ಕೆ ಅಣಿಯಾಗಿದೆ.
ಜೂನ್ 15 ರಂದು ಪೂರ್ವಾಹ್ನ ಗಂಟೆ 9ರಿಂದ ದಶಮ ಸ್ಕಂದ ಪಾರಾಯಣವೂ ನಾರಾಯಣ ಮೂರ್ತಿ ಕಾಂಞಂಗಾಡ್ ಇವರಿಂದ ಪ್ರಾರಂಭವಾಗುತ್ತದೆ. ಸಂಜೆ ಗಂಟೆ 5ಕ್ಕೆ ತಂತ್ರಿಗಳ ಆಗಮನವಾಗುತ್ತದೆ. 6ರಿಂದ ವೈದಿಕ ಕಾರ್ಯಕ್ರಮಗಳು ನಡೆಯಲಿದೆ.ಜೂನ್ 16 ರಂದು ಬೆಳಿಗ್ಗೆ 7ರಿಂದ

ಗಣಪತಿ ಹೋಮದಿಂದ ವೈದಿಕ ಕಾರ್ಯಕ್ರಮಗಳು ಪ್ರಾರಂಭಗೊಂಡು ತದನಂತರ ಭಾಗವತದಶಮ ಸ್ಕಂದ ಪಾರಾಯಣ ಮುಂದುವರೆದು ಪೂರ್ವಾಹ್ನ ಗಂಟೆ 10ಕ್ಕೆ ಮುಕ್ತಾಯಗೊಳ್ಳಲಿದೆ.
ಜೂನ್ 17 ರ ಸಂಜೆ ಗಂಟೆ 4.30ರಿಂದ ಭಜನೆಯಿಂದ ಪ್ರಾರಂಭಗೊಂಡು ಗಂಟೆ 6ರ ನಂತರ ವಿವಿಧ ಹೋಮ ಹವನಗಳು ನಡೆಯಲಿದೆ.
ಜೂನ್ 18 ರಂದು ಪುನರ್ ಪ್ರತಿಷ್ಠಾ ಕಲಶಾಭಿಷೇಕ ನಡೆಯಲಿದೆ. ಪೂ. 8ಕ್ಕೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಬೆಳಿಗ್ಗೆ ಗಂಟೆ 8.08 ರಿಂದ 9.06ರ ಕರ್ಕಾಟಕ ಲಗ್ನದ ಶುಭ ಮುಹೂರ್ತದಲ್ಲಿ
ಶ್ರೀ ಕಲ್ಕುಡ, ಕಲ್ಲುರ್ಟಿ, ಗುಳಿಗ ದೈವಗಳಿಗೆ ಪುನರ್ ಪ್ರತಿಷ್ಠಾ ಕಲಶಾಭಿಷೇಕ ನಡೆಯಲಿದೆ. ಬಳಿಕ ದೈವಗಳಿಗೆ ತಂಬಿಲ, ಮಹಾಪೂಜೆ, ನಿತ್ಯ ನೈಮಿತ್ಯಾದಿಗಳ ನಿರ್ಣಯ ಆಗಿ ಪ್ರಸಾದ ವಿತರಣೆಯಾಗುತ್ತದೆ.
ಪೂ.10.30ರಿಂದ ಧಾರ್ಮಿಕ ಸಭೆಯನ್ನು ಏರ್ಪಡಿಸಿದ್ದು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಮಹಾ ಸ್ವಾಮೀಜಿಗಳವರು ಆಶೀರ್ವಚನ ನೀಡಲಿದ್ದಾರೆ. ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ವೇ. ಮೂ.ದೇಲಂಪಾಡಿ ಗಣೇಶ ತಂತ್ರಿಯವರು ಗೌರವ ಉಪಸ್ಥಿತಿಯಲ್ಲಿ ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ. ಕೆ. ವಿ. ಚಿದಾನಂದ, ಶ್ರೀ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಆಡಳಿತ ಮೊಕೇಸರರಾದ ಡಾ. ಹರಪ್ರಸಾದ್ ತುದಿಯಡ್ಕ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀ ಪಿ. ಕೆ. ಉಮೇಶರವರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ಶಿಲೆ ಕಲ್ಲಿನಗುಡಿ ನಿರ್ಮಾಣ, ಮರದ ಮಾಡಿನ ಕೆಲಸ, ತಾಮ್ರದ ಹೊದಿಕೆ, ಗ್ರಾನೆಟ್ ಕಲ್ಲು ಹಾಸು, ಗುಳಿಗನ ಕಟ್ಟೆ, ಅಯ್ಯಂಗಾಯಕಟ್ಟೆ, ಹೀಗೆ ರೂ.75 ಲಕ್ಷಗಳ ಕಾಮಗಾರಿಗಳು ಆಗಿವೆ. ದಾನಿಗಳ ಹಾಗು

ಭಕ್ತರು ನೀಡುವ ದೇಣಿಗೆಯಲ್ಲಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದರು.ಈಗಾಗಲೇ ಸುಳ್ಯ ನಗರದ ಪ್ರತಿ ವಾರ್ಡ್ ಮಟ್ಟದಲ್ಲಿಯೂ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಸಮಿತಿಗಳನ್ನು ಮಾಡಿದ್ದು, ಅದರ ಮೂಲಕ ಪ್ರತಿ ಮನೆಗಳಿಗೆ ಆಮಂತ್ರಣ ನೀಡಿ ಅವರು ನೀಡುವ ದೇಣಿಗೆಯನ್ನು ಸ್ವೀಕರಿಸಲಾಗುತ್ತದೆ. ವಾರ್ಡ್ ಮಟ್ಟದಲ್ಲಿ ಹಸಿರು ಕಾಣಿಕೆ ನೀಡುವವರಿಗೆ ಅವಕಾಶವಿದೆ ಎಂದರು.ವಾಹನ ನಿಲುಗಡೆಗೆ ಇಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗ ಮತ್ತು ಗಾಂಧಿನಗರ ಶಾಲಾ ಮೈದಾನದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕೃಷ್ಣ ಕಾಮತ್ ಹಾಗು ಪಿ.ಕೆ.ಉಮೇಶ್ ವಿವರಿಸಿದರು.
ಸುದ್ದಿ ಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ ಪ್ರಭು, ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ, ಕೋಶಾಧಿಕಾರಿ ಅವಿನಾಶ್ ಕುರುಂಜಿ, ಮಾಧ್ಯಮ ಸಂಚಾಲಕ ಶಿವಪ್ರಸಾದ್ ಆಲೆಟ್ಟಿ, ಆಡಳಿತ ಸಮಿತಿ ಹಾಗು ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.













