ನವದೆಹಲಿ: ಕತ್ತಲು ಕವಿದು ನಿರಂತರ ಸುರಿಯಬೇಕಾದ ಮಳೆಗಾಲ ಜೂನ್, ಜುಲೈ ತಿಂಗಳಲ್ಲಿ ಮಳೆ ಎಲ್ಲೋ ಮಾಯವಾಗಿದೆ.ಹೆಚ್ಚಿದ ಬಿಸಿಲ ತಾಪಕ್ಕೆ, ಏರಿದ ಉಷ್ಣಾಂಶಕ್ಕೆ ಜನರು ಬೆವರಿ ಬಸವಳಿಯುವ ಸ್ಥಿತಿ ನಿರ್ಮಾಣವಾಗಿದೆ.ವಾರದ ಹಿಂದೆ ಸುರಿಯುತ್ತಿದ್ದ ಮಳೆ ಕೂಡ ಈಗ ಕಡಿಮೆಯಾಗುತ್ತಾ ಬಂದಿದೆ.ಕಳೆದ 3-4 ದಿನಗಳಿಂದ
ಮಳೆಯೇ ಸುರಿದಿಲ್ಲ. ಎಲ್ಲೆಡೆ ಬಿಸಿಲ ಝಳ ಏರುತ್ತಿದೆ. ಹವಾಮಾನ ಶಾಸ್ತ್ರಜ್ಞರ ಪ್ರಕಾರ, ಭಾರತದ ಹವಾಮಾನದ ಮೇಲೆ ಎಲ್ ನಿನೊ ಪ್ರಭಾವ ಬೀರುತ್ತಿದೆ. ಜುಲೈ ಮಧ್ಯದಲ್ಲಿ ವ್ಯಾಪಕವಾಗಿ ಮಳೆಯಾಗಬೇಕಿತ್ತು, ಆದರೆ ಬಿಸಿ ವಾತಾವರಣ ಆವರಿಸುತ್ತಿರುವುದರಿಂದ ದೇಶದಲ್ಲಿ ಶುಷ್ಕ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದಿದ್ದಾರೆ.
ನೈಋತ್ಯ ಮುಂಗಾರು ಈಗಾಗಲೇ ವಿರಾಮದ ಹಂತಕ್ಕೆ ತಲುಪಿದ್ದು,ಮುಂದಿನ ದಿನಗಳಲ್ಲಿಯೂ ಮಧ್ಯ, ಪಶ್ಚಿಮ ಮತ್ತು ವಾಯವ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಮಳೆ ಕಡಿಮೆಯಾಗುವ ನಿರೀಕ್ಷೆಯಿದೆ.ಎಲ್ ನಿನೊ ಕಾರಣದಿಂದಾಗಿಯೇ ದೇಶದಲ್ಲಿ ಮಳೆ ಪ್ರಮಾಣ ಕುಸಿಯಲಾರಂಭಿಸಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹವಾಮಾನ ವಿದ್ಯಮಾನಗಳು ಸಕ್ರಿಯವಾಗಿಲ್ಲದ ಕಾರಣ ಮಳೆ ಬರಲು ಬೇಕಾದ ಪರಿಸ್ಥಿತಿ ಕ್ಷೀಣಿಸಿದೆ. ಮುಂಗಾರು ಅವಧಿಯಲ್ಲಿ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗುವ ವಾಯುಭಾರ ಕುಸಿತವೂ ಈ ಬಾರಿ ಆಗದ ಕಾರಣ ದೊಡ್ಡ ಮಟ್ಟದ ಮಳೆ ಬರಲು ಪೂರಕ ವಾತಾವಾರಣ ಇಲ್ಲ ಎನ್ನಲಾಗಿದೆ.ಎಲ್ ನಿನೊ ಕಾರಣದಿಂದಾಗಿ ಮುಂಗಾರು ದುರ್ಬಲಗೊಂಡಿರುವುದರಿಂದತೇವಾಂಶ ಕುಸಿಯುತ್ತಿದ್ದು, ಮೋಡಗಳ ರಚನೆಯೂ ಆಗುತ್ತಿಲ್ಲ.ಅದಾಗ್ಯೂ
ಜುಲೈನ ಕೊನೆಯಲ್ಲಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಸಾಧ್ಯತೆಯಿದೆ. ಅದು ಸಾಧ್ಯವಾದರೆ ಮುಂಗಾರು ಚುರುಕುಗೊಳ್ಳುವ ಸಂಭವವಿದೆ. ಇದರಿಂದ ಪೂರ್ವ, ಮಧ್ಯ ಮತ್ತು ಉತ್ತರ ಭಾರತದಲ್ಲಿ ಮಳೆ ಬೀಳಬಹುದು.ಆದರೂ ಈ ಬಾರಿ ಭಾರತದಾದ್ಯಂತ ಸಾಮಾನ್ಯಕ್ಕಿಂತ ಕಡಿಮೆ ಮಳೆ ಸುರಿಯಲಿದೆ ಎಂದು ಹವಾಮಾನ ಶಾಸ್ತ್ರಜ್ಞರು ಹೇಳಿದ್ದಾರೆ. ರಾಜ್ಯದಲ್ಲಿ ಹಲವು ಭಾಗಗಳಲ್ಲಿ ಬಿಸಿಲು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.






