ಸುಳ್ಯ:ಟೀಮ್ ಉಬಾರ್, ಸುಳ್ಯ ರೈತ ಉತ್ಪಾದಕ ಕಂಪೆನಿ ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ ಮತ್ತು ಸುದ್ದಿ ಕೃಷಿ ಅರಿವು ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಸ್ಥಳೀಯ ತಾಲೂಕು ಆಡಳಿತ,ತಾಲೂಕು ಪಂಚಾಯತ್, ಕೃಷಿ ಸಂಬಂಧಿತ ಸರಕಾರಿ ಇಲಾಖೆಗಳು ಹಾಗೂ ಸಹಕಾರಿ ಸಂಘಗಳು, ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಹಲಸು ಮತ್ತು ಮಾವು ಮೇಳ 2026ನ್ನು ಆಯೋಜಿಸಲಾಗಿದೆ. ಜೂನ್ 12, 13, 14 ರಂದು ಮೂರು ದಿನಗಳ
ಹಲಸು ಮತ್ತು ಮಾವು ಮೇಳ ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದ ವಠಾರದಲ್ಲಿ ನಡೆಯಲಿದೆ ಎಂದು ಹಲಸು ಮತ್ತು ಮಾವು ಮೇಳದ ಅಧ್ಯಕ್ಷರು ಹಾಗು ಸುಳ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜೂ.12ರಂದು ಪೂ.10ಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಮೇಳವನ್ನು ಉದ್ಘಾಟಿಸುವರು.ಹಲಸು ಮಾವು ಮೇಳ ಸಮಿತಿಯ ಗೌರವಾಧ್ಯಕ್ಷ, ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ತಹಶೀಲ್ದಾರ್ ಕೆ.ಮಂಜುಳಾ ಎಂ., ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ, ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್., ಸುದ್ದಿ ಮಾಧ್ಯಮ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಹಾಗೂ ಹಲಸು ಮಾವು ಮೇಳದ ಗೌರವ ಮಾರ್ಗದರ್ಶಕ ಡಾ.ಯು.ಪಿ ಶಿವಾನಂದ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪ ಗೋವಿಂದೇ ಗೌಡ ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಐ.ಕೆ. ದೊಡ್ಡಮನಿ ಉಪಸ್ಥಿತರಿರುವರು.
ಸಮಾರೋಪ ಸಮಾರಂಭ ಜೂ.14ರಂದು ಸಂಜೆ 5ಕ್ಕೆ ನಡೆಯಲಿದ್ದು,ಸಭಾ ಅಧ್ಯಕ್ಷತೆಯನ್ನು ಸುಳ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಹಾಗೂ ಸಮಿತಿ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ, ಎಒಎಲ್ಇ ಕಮಿಟಿ ಬಿ ಇದರ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ., ರಾಜ್ಯ ರೈತ ರತ್ನ ಪ್ರಶಸ್ತಿ ಪುರಸ್ಕೃತ ಅಶೋಕ ಕುಮಾರ್ ಕೆ.ಎಸ್., ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ನಗರ ಯೋಜನಾ ಪ್ರಾಧೀಕಾರದ ಅಧ್ಯಕ್ಷ ಮುಸ್ತಾಫ ಕೆ.ಎಂ., ತಾಲೂಕು

ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ.ಕುಸುಮಾಧರ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್ ಉಪಸ್ಥಿತರಿರುವರು.
ಹಲಸು ಮಾವು ಮೇಳದಲ್ಲಿ ನೂರಕ್ಕೂ ಹೆಚ್ಚು ಸ್ಟಾಲ್ಗಳು ಬರಲಿದ್ದು, ವಿವಿಧ ಬಗೆಯ ಹಲಸು ಮಾವು ಇತರ ತಾಜಾ ಹಣ್ಣುಗಳ ಸ್ಟಾಲ್ಗಳು, ಹಲಸಿನ ಉಪ ಉತ್ಪನ್ನಗಳು, ಸ್ಥಳದಲ್ಲಿ ತಯಾರಿಸಿಕೊಡುವ ಹಲಸಿನ, ಮಾವಿನ ಬಗೆ ಬಗೆಯ ತಿಂಡಿಗಳು ಇರುತ್ತದೆ. ನರ್ಸರಿ ಬ್ಲಾಕ್ ಪ್ರತ್ಯೇಕವಿದ್ದು, ಎಲ್ಲಾ ಜಾತಿಯ ಗಿಡಗಳು ಲಭ್ಯವಿರುತ್ತದೆ. ಇದರೊಂದಿಗೆ ರೈತರ ಸ್ಥಳೀಯ ಉತ್ಪನ್ನಗಳು, ಬಟ್ಟೆಗಳು, ಆಟಿಕೆಗಳು, ಔಷಧಿಗಳು ಕೃಷಿ ಪೂರಕ ಮಳಿಗೆಗಳು ಸಹ ಇರುತ್ತದೆ. ವಿಶೇಷವಾಗಿ ರೈತರ ಮನೆಯಲ್ಲಿರುವ ಉತ್ತಮ ಜಾತಿಯ ಹಲಸಿನ ಮರದ ಗಿಡಗಳನ್ನು ರೈತರು ಅಪೇಕ್ಷಿಸಿದಲ್ಲಿಆ ಮರದ ಗೆಲ್ಲನ್ನು ತಂದಲ್ಲಿ ಉಚಿತವಾಗಿ ಕಸಿಕಟ್ಟಿ ನೀಡಲಾಗುವುದು. ಮದರ್ ಪ್ಲಾಂಟ್ ಲಭ್ಯವಿರುತ್ತದೆ. ಇದನ್ನು ಜಾಕ್ ಅನಿಲ್ರವರು ಮಾಡಿಕೊಡಲಿದ್ದಾರೆ. ಇದರಿಂದ ಈಗಾಗಲೇ ಹಳ್ಳಿಯಲ್ಲಿರುವ ಅಪರೂಪದ ತಳಿಗಳನ್ನು ಉಳಿಸಿ ಬೆಳೆಸಿದಂತಾಗುತ್ತದೆ ಎಂದು ವೀರಪ್ಪ ಗೌಡ ಕಣ್ಕಲ್ ತಿಳಿಸಿದರು.
ವಿಚಾರಗೋಷ್ಠಿ:
ಮೇಳದ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎನ್.ಎ.ಜ್ಞಾನೇಶ್ ಮಾತನಾಡಿ ಕಾರ್ಯಕ್ರಮದಲ್ಲಿ ಹಲವು ವಿಚಾರ ಸಂಕಿರಣಗಳು ನಡೆಯಲಿದೆ.ಜೂ12ರಂದು ಉದ್ಘಾಟನಾ ಕಾರ್ಯಕ್ರಮದ ಬಳಿಕ ಹಲಸು, ಮಾವು, ಗೇರು ಮೌಲ್ಯವರ್ದಿತ ಉತ್ಪನ್ನಗಳ ಬಗ್ಗೆ ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾಹಿತಿ ನೀಡಲಿದ್ದಾರೆ.
ಜೂ. 13ರಂದು ಬೆಳಿಗ್ಗೆ 10 ಗಂಟೆಗೆ ಕಾಫಿ ಗಿಡಗಳ ನಿರ್ವಹಣೆ ಕುರಿತು ಕಾಫಿ ಮಂಡಳಿಯ ವಿಜ್ಞಾನಿ ಡಾ.ಎಸ್.ಎ. ನಡಾಫ್ ಮಾಹಿತಿ ನೀಡುವರು. ಮಧ್ಯಾಹ್ನ 12ರಿಂದ ಕಾಳು ಮೆಣಸಿನ ನಿರ್ವಹಣೆ ಕುರಿತು ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಾಳು ಮೆಣಸು ಬೆಳೆಗಾರ ಸುರೇಶ ಬಲ್ನಾಡು ಮಾಹಿತಿ ನೀಡುವರು. ಜೂ.14ರಂದು ಬೆಳಿಗ್ಗೆ 10ಗಂಟೆಗೆ ಅಡಿಕೆ ಬೆಳೆಯಲ್ಲಿ ಪೋಷಾಕಾಂಶಗಳ ನಿರ್ವಹಣೆ ಕುರಿತು ಅವೆಂಚೂರ ಆಗ್ರೋ ಪ್ರೊಡಕ್ಟ್ ಆಡಳಿತ ನಿರ್ದೇಶಕ ಬಿ.ಕೆ. ವಿಶುಕುಮಾರ್, ಬೆಳಿಗ್ಗೆ 11ರಿಂದ ಹಲಸಿನ ಬೀಜದ ಉಪಯುಕ್ತತೆ ಬಗ್ಗೆ ಅಭಿಜ್ಞಾನ ಫುಡ್ ಪ್ರೊಡಕ್ಟ್ ಪ್ರೈ.ಲಿ. ಆಡಳಿತ ನಿರ್ದೇಶಕ ರಾಧಾಕೃಷ್ಣ ಇಟ್ಟಿಗುಂಡಿ, ಮಧ್ಯಾಹ್ನ 12ರಿಂದ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಕುರಿತು ಪಿಂಗಾರ ರೈತ ಉತ್ಪಾದಕ ಸಂಸ್ಥೆ ಅಧ್ಯಕ್ಷ ರಾಮ್ ಕಿಶೋರ್ ಮಾಹಿತಿ ನೀಡುವರು ಎಂದು ತಿಳಿಸಿದರು.
ಸಾಧಕ ರೈತರಿಗೆ ಸನ್ಮಾನ:
ಪ್ರಚಾರ ಸಮಿತಿಯ ಸಂಚಾಲಕ ಹರೀಶ್ ಬಂಟ್ವಾಳ್ ಮಾತನಾಡಿ
ಮೇಳದಲ್ಲಿ ಹಲಸು ಮತ್ತು ಮಾವು ಕೃಷಿ ಸಾಧಕರಾದ ಸುಬ್ರಾಯ ಭಟ್ ಮಾಪಲತೋಟ, ಕುಮುದಾ ಲಕ್ಷೀಶ ಗಬ್ಬಡ್ಕ, ಗೋವಿಂದ ಭಟ್ ಉಬರಡ್ಕ, ಸುಜಾತ ಭಾಸ್ಕರ ಕಂಬಳಿಮೂಲೆ ಮತ್ತು ನಮಾಮಿ ಬಳಗ ಸುಳ್ಯ ಇವರುಗಳನ್ನು ಸನ್ಮಾನಿಸಲಾಗುವುದು. ಇದರೊಂದಿಗೆ ವಿವಿಧ ಕೃಷಿ ಸಾಧಕರ ಸಾಕ್ಷ್ಯ ಚಿತ್ರ ಪ್ರದರ್ಶನ ಹಾಗೂ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಮಹಿಳೆಯರಿಗಾಗಿ ವಿಶೇಷವಾಗಿ ಜೂ.14ರಂದು ಅಪರಾಹ್ನ 3ರಿಂದ 4ರವರೆಗೆ ಅಡುಗೆ ಸ್ಪರ್ಧೆ ನಡೆಯಲಿದ್ದು, ಹಲಸು, ಮಾವು, ಗೇರು ಉತ್ಪನ್ನಗಳಿಂದ ಮನೆಯಲ್ಲಿಯೇ ಅಡುಗೆ ತಯಾರಿಸಿ ತಂದು ಪ್ರದರ್ಶನಕ್ಕೆ ಇಡಬಹುದು ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು:
ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಮಧುರಾ ಎಂ.ಆರ್. ಮಾತನಾಡಿ ‘ಹಲಸು, ಮಾವು ಮೇಳ ಜಾತ್ರೆಯಂತೆ ನಡೆಯಬೇಕೆಂಬ ದೃಷ್ಠಿಯಿಂದ ಪ್ರತಿದಿವಸ ಸಂಜೆ 6.30ರಿಂದ 8.30ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು,ಜೂ.12ರಂದು ಸಂಜೆ 6ರಿಂದ ತಾಲೂಕು ಸಂಜೀವಿನಿ ಒಕ್ಕೂಟದ ಸದಸ್ಯರಿಂದ ಸಾಂಸ್ಕೃತಿಕ ವೈಭವ, 7ರಿಂದ ವಿದುಷಿ ಇಂದುಮತಿ ನಾಗೇಶ್ ನಿರ್ದೇಶನದಲ್ಲಿ ನಟರಾಜ ನೃತ್ಯನಿಕೇತನ ಕಲ್ಲುಗುಂಡಿ ಸುಳ್ಯ ಶಾಖೆಯ ಶಿಷ್ಯ ವೃಂದದಿಂದ ನೃತ್ಯ ವೈಭವ ನಡೆಯಲಿದೆ.ಜೂ. 13ರಂದು ಸಂಜೆ 6ರಿಂದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ದೇಲಂಪ್ಪಾಡಿ ಮಹಿಳಾ ಯಕ್ಷಗಾನ ತಂಡದವರಿಂದ ದಕ್ಷಯಜ್ಞ ಯಕ್ಷಗಾನ ನಡೆಯಲಿದೆ. ಸಂಜೆ 7ರಿಂದ ಸ್ಥಳೀಯ ಕಲಾವಿದರಿಂದ ವಿವಿಧ ವಿನೋದಾವಳಿಗಳು ನಡೆಯಲಿದೆ.
ಜೂ.14ರಂದು ಸಂಜೆ 4ರಿಂದ ಪಂಡಿತ್ ಸಿದ್ದಲಿಂಗೇಶ್ ಕಣವಿ, ಗಾನಯೋಗಿ ಮ್ಯೂಸಿಕ್ ಅಕಾಡೆಮಿ ಬೆಂಗಳೂರು ಇವರ ಶಿಷ್ಯರಾದ ಮಾವಂಜಿ ಸಹೋದರಿಯರಿಂದ ಸುಗಮ ಸಂಗೀತ ಸಂಜೆ 4.30ರಿಂದ ಗೋಲ್ಡನ್ ಬುಕ್ ಆಫ್ ವರ್ಡ್ ರೆಕಾರ್ಡ್ ಮಾಡಿದ ಅಭಿಷೇಕ್ ಕಣೆಮರಡ್ಕ ಇವರಿಂದ ಕೂಚುಪುಡಿ ನೃತ್ಯ, ಸಂಜೆ 6.30ರಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇವರ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೇಳದ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯರಾಮ ಮುಂಡೋಳಿಮೂಲೆ, ಪ್ರಣವ ಸೌಹಾರ್ದ ಸಹಕಾರಿ ಸಂಘದ ಸುಳ್ಯ ಶಾಖಾ ವ್ಯವಸ್ಥಾಪಕ ರಂಜಿತ್ ಅಡ್ತಲೆ, ಟೀಂ ಉಬಾರ್ನ ರಾಕೇಶ್ ಪ್ರಭು, ಮೇಳದ ಪದಾಧಿಕಾರಿಗಳಾದ ಎಂ.ಎಸ್.ಶ್ರೀಶ, ಸಾಂಸ್ಕೃತಿಕ ಸಮಿತಿ ಸದಸ್ಯ ಯಶ್ವಿತ್ ಕಾಳಂಮನೆ ಉಪಸ್ಥಿತರಿದ್ದರು.













