ಸುಳ್ಯ:ಸುಳ್ಯ ನಗರದ ಕಸವನ್ನು ಇನ್ನು ಯಾವುದೇ ಕಾರಣಕ್ಕೂ ಕಲ್ಚರ್ಪೆಗೆ ಹಾಕಲು ಬಿಡುವುದಿಲ್ಲ. ಕಲ್ಚರ್ಪೆಯಲ್ಲಿ ಅವೈಜ್ಞಾನಿಕ ಕಸ ವಿಲೇವಾರಿ ಮತ್ತು ತ್ಯಾಜ್ಯ ಸಮಸ್ಯೆಯ ವಿರುದ್ಧ ಸೆ.15 ರಂದು ಪ್ರಜಾಪ್ರಭುತ್ವ ದಿನದಂದು ಕಪ್ಪು ಪಟ್ಟಿ ಧರಿಸಿ ರಸ್ತೆ ಬದಿಯಲ್ಲಿ ಮಾನವ ಸರಪಳಿ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಕಲ್ಪರ್ಪೆ ಪರಿಸರ ಹೋರಾಟ ಸಮಿತಿ ಪದಾಧಿಕಾರಿಗಳು ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಕೆ.ಗೋಕುಲ್ದಾಸ್ ಕಳೆದ
15 ವರ್ಷದಿಂದ ಹೋರಾಟ ನಡೆಸುತ್ತಾ ಬಂದರೂ ಅಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಿ ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ.ಬರ್ನಿಂಗ್ ಮೆಷಿನ್ ಅಳವಡಿಕೆ ಮಾಡಿದರೂ ಅದರಿಂದ ಕಸ ವಿಲೇವಾರಿ ಮಾಡಲಾಗುತ್ತಿಲ್ಲ. ಬರ್ನಿಂಗ್ ಮೆಷಿನ್ ಮೂಲಕ ಗ್ಯಾಸ್, ಕರೆಂಟ್ ಉತ್ಪಾದನೆ ಮಾಡಿ ಜನರಿಗೆ ನೀಡುತ್ತೇವೆ ಎಂದು ಪೊಳ್ಳು ಭರವಸೆ ಮಾತ್ರ ನೀಡಿದ್ದಾರೆ. ಈ ಹಿನ್ನಲೆಯಲ್ಲಿ
ಪ್ರಜಾಪ್ರಭುತ್ವ ದಿನದಂದು ಕಪ್ಪು ಪಟ್ಟಿ ಧರಿಸಿ ಹೆದ್ದಾರಿ ಬದಿಯಲ್ಲಿ ಮಾನವ ಸರಪಳಿ ಮಾಡಿ ಪ್ರತಿಭಟನೆ ನಡೆಸುತ್ತೇವೆ. ಮುಂದಿನ ತಾ.ಪಂ., ಜಿ.ಪಂ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದರು. ಕಲ್ಚರ್ಪೆ
ಪರಿಸರದ ಜನರ ಜೀವನ ರಕ್ಷಣೆ ಮಾಡಿ, ಸಾಂಕ್ರಾಮಿಕ ರೋಗ ತಡೆಗಟ್ಟಿ, ನಗರಕ್ಕೆ ಶುದ್ಧ ಕುಡಿಯುವ ನೀರು ಕೊಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಹೋರಾಟ ನಡೆಸಲಾಗುವುದು. ಕಲ್ಚರ್ಪೆಯಿಂದ ಕಸ, ಕೊಳಚೆ ನದಿಯ ನೀರು ಸೇರುತ್ತದೆ ಎಂದ ಅವರು
ಸದಸ್ಯರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ. ಸದಸ್ಯರಿಗೆ ಅಲ್ಲಿ ಗ್ರಾಮ ವಾಸ್ತವ್ಯ ಮತ್ತು ಭೋಜನ ಕೂಟ ಏರ್ಪಡಿಸುತ್ತೇವೆ ಎಲ್ಲಾ ಸದಸ್ಯರು ಭಾಗವಹಿಸಬೇಕು ಎಂದು ಗೋಕುಲ್ದಾಸ್ ಒತ್ತಾಯಿಸಿದರು.

ಹೋರಾಟ ಸಮಿತಿಯ ಉಪಾಧ್ಯಕ್ಷ ಅಶೋಕ್ ಪೀಚೆ ಮಾತನಾಡಿ ಕಲ್ಚರ್ಪೆಯಲ್ಲಿ ಅಸಮರ್ಪಕ ನಿರ್ವಹಣೆಯಿಂದ ನಿರಂತರ ಸಮಸ್ಯೆ ಆಗುತಿದೆ. ಶಾಸಕಿ ಭಾಗೀರಥಿ ಮುರುಳ್ಯ ಅವರು ಕಲ್ಪರ್ಪೆಗೆ ಮುಂದೆ ಕಸ ಹಾಕಬಾರದು ಎಂದು ಸೂಚಿಸಿದ್ದಾರೆ ಮತ್ತು ಸಭೆ ನಡೆಸಿ ಹೊಸ ಸ್ಥಳ ಹುಡುಕಬೇಕು ಎಂದು ಹೇಳಿದ್ದಾರೆ.ಆದರೆ ಮೊದಲ ಸಭೆಯಲ್ಲಿ ಅದಕ್ಕೆ ವ್ಯತಿರಿಕ್ತವಾದ ಚರ್ಚೆ ನಡೆದಿದೆ. ಇದು ಯಾಕೆ. ಶಾಸಕರ ಮಾತಿಗೆ ಗೌರವ ಕೊಟ್ಟು ಅವರ ಸೂಚನೆಯಂತೆ ಹೊಸ ಜಾಗ ಹುಡುಕಬೇಕು. ಇನ್ನು ಮುಂದೆ ಯಾವ ಕಾರಣಕ್ಕೂ ಅಲ್ಲಿಗೆ ಕಸ ಹಾಕಬಾರದು.ನಗರದ
ಜನರಿಗೆ ತೊಂದರೆ ಆಗಬಾರದು ಎಂದು ಇಷ್ಟು ಸಮಯ ಕಾದಿದ್ದೇವೆ. ಕಲ್ಚರ್ಪೆಯಲ್ಲಿಯೇ ಕಸ ಹಾಕಬೇಕು ಎಂದು ಯಾರದಾದರು ಒತ್ತಡ ಇದೆಯಾ ಎಂದು ಅವರು ಪ್ರಶ್ನಿಸಿದರು.
ಹೋರಾಟ ಸಮಿತಿಯ ಅಧ್ಯಕ್ಷ ಸುದೇಶ್ ಅರಂಬೂರು ಮಾತನಾಡಿ ಕಲ್ಚರ್ಪೆಯಲ್ಲಿ ಇನ್ನು ಅಲ್ಲಿ ಕಸ ಹಾಕಬಾರದು. ಇನ್ನು ಅಲ್ಲಿ ಕಸ ಹಾಕಿದರೆ
ನಾವು ಹೋರಾಟ ಮಾಡುತ್ತೇವೆ. ಅಲ್ಲಿ ತುಂಬಿರುವ ಕಸವನ್ನು ವಿಲೇವಾರಿ ಮಾಡಬೇಕು. ಪರಿಸರದಲ್ಲಿ ತುಂಬಾ ಸಮಸ್ಯೆ ಇದೆ. ಕುಡಿಯುವ ನೀರು, ಸೊಳ್ಳೆ, ಕಾಟ ಇದೆ. ರೋಗಗಳು ಹರಡುತ್ತಿವೆ. ಪರಿಸರ ಹೊಗೆ ಮಯವಾಗಿದೆ.ನೀರು ಮಲಿನವಾಗುತ್ತದೆ. ಕೊಳಚೆ, ತ್ಯಾಜ್ಯ ನೀರು ಪಯಸ್ವಿನಿ ನದಿಗೆ ಸೇರುತ್ತಿದೆ ಇದರಿಂದ ದೊಡ್ಡ ಸಮಸ್ಯೆ ಸೃಷ್ಠಿಯಾಗುತಿದೆ. ಆದುದರಿಂದ ಕಸ ಹಾಕುವುದು ಕೂಡಲೇ ನಿಲ್ಲಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಸಂಚಾಲಕರಾದ ಯೂಸೂಫ್ ಅಂಜಿಕಾರ್, ಕಾರ್ಯದರ್ಶಿ ಬಾಲಚಂದ್ರ ಕಲ್ಚರ್ಪೆ, ಉಪಾಧ್ಯಕ್ಷ ನಾರಾಯಣ ಜಬಳೆ,ಸದಸ್ಯರಾದ ಜನಾರ್ಧನ ಚೊಕ್ಕಾಡಿ, ವೆಂಕಟೇಶ್ ಕಲ್ಚರ್ಪೆ, ಅನಿಲ್ ಸಿ.ಕೆ ಉಪಸ್ಥಿತರಿದ್ದರು.