ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮೋಡ – ಬಿಸಿಲಿನ ವಾತಾವರಣ ಇರಲಿದ್ದು ಕಾಸರಗೋಡು ದ.ಕ. ಉಡುಪಿ ಉ.ಕ ಜಿಲ್ಲೆಗಳಲ್ಲಿ ಮಧ್ಯಾಹ್ನ ನಂತರ – ರಾತ್ರಿ ಒಂದೆರಡು ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ಮುಂಗಾರು ದುರ್ಬಲವಾದ ಕಾರಣ ತೀವ್ರ ಬಿಸಿಲಿನ ವಾತಾವರಣ ಆರಂಭವಾಗಿದ್ದು ಗರಿಷ್ಠ ತಾಪಮಾನ
2-3 ಏರಿಕೆ ಆಗಬಹುದು. ಲೋ ಪ್ರೆಷರ್ ಕಾರಣ ಸೆಪ್ಟೆಂಬರ್ 3 ತನಕ ಪ್ರತಿದಿನ ಒಂದೆರಡು ಮಳೆ ಮುಂದುವರೆಯಬಹುದು. ನಂತರ ಮಳೆ ಕಡಿಮೆ ಆಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಲೆನಾಡಿನ ಕೊಡಗು,ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಮಡಿಕೇರಿ ಮೂಡಿಗೆರೆ ಶೃಂಗೇರಿ ತೀರ್ಥಹಳ್ಳಿ ಹೊಸನಗರ ಸಾಗರ ತಾಲ್ಲೂಕುಗಳ ಘಟ್ಟಪ್ರದೇಶಗಳ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯಾಗಬಹುದು. ಉಳಿದ ತಾಲ್ಲೂಕುಗಳಲ್ಲಿ ಬಿಸಿಲಿನ ವಾತಾವರಣ ಇರಲಿದ್ದು ಸಂಜೆ ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ.ದಕ್ಷಿಣ ಒಳನಾಡಿನಲ್ಲಿ
ಮಳೆ ಕಡಿಮೆ ಆಗಿದ್ದು ಬೆಂಗಳೂರು – ಗ್ರಾಮಾಂತರ ತುಮಕೂರು ರಾಮನಗರ ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯಾಗಲಿದ್ದು ಒಂದೆರಡು ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗಬಹುದು. ಸೆಪ್ಟೆಂಬರ್ 1 ರಿಂದ ಮೋಡದ ವಾತಾವರಣ ಮುಂದುವರೆಯಲಿದೆ.
ಉತ್ತರ ಒಳನಾಡಿನ ಬೆಳಗಾವಿ ಬಿಜಾಪುರ ಬೀದರ್ ಧಾರವಾಡ ಹಾವೇರಿ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಭಾಗಷಃ ಮೋಡದ ವಾತಾವರಣ ಮುಂದುವರೆಯಲಿದೆ.
ಬಂಗಾಳ ಕೊಲ್ಲಿಯ ಉತ್ತರದಲ್ಲಿ ಉತ್ತರ ಒರಿಸ್ಸಾ – ಪ. ಬಂಗಾಳದ ಸಮೀಪ ಇರುವ ಲೋ ಪ್ರೆಷರ್ ಪಶ್ಚಿಮದತ್ತ ಚಲಿಸುವ ಸಾಧ್ಯತೆ ಇದೆ.ಇದು ದಕ್ಷಿಣ ಭಾರತಕ್ಕೆ ಜಾಸ್ತಿ ಪ್ರಭಾವ ಬೀರಲಿಕ್ಕಿಲ್ಲ. ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಒಂದು ವಾರ ಪ್ರತಿದಿನ ಒಂದೆರಡು ಮಳೆಯಾಗಬಹುದು. ಒಳನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಕಡಿಮೆ ಹಿಂಗಾರು ಮಳೆಯಾಗುವ ನಿರೀಕ್ಷೆ ಇದ್ದರೂ ಬರದ ಪರಿಸ್ಥಿತಿ ಮುಂದುವರೆಯಬಹುದು.
ಕರಾವಳಿಯ ವಿವಿಧ ಜಿಲ್ಲೆಗಳಲ್ಲಿ ನಿನ್ನೆಯಿಂದ ಒಂದೆರಡು ಸಾಧಾರಣ ಮಳೆಯಾಗಿದೆ ಮಲೆನಾಡಿನಲ್ಲಿಯೂ ಮಳೆ ಪ್ರಮಾಣ ಕಡಿಮೆ ಆಗಿದ್ದು ಮಡಿಕೇರಿ,ಸೋಮವಾರಪೇಟೆ, ತೀರ್ಥಹಳ್ಳಿ ಸಾಗರ ಹೊಸನಗರ ತಾಲ್ಲೂಕುಗಳ ಅಲ್ಲಲ್ಲಿ ಸಾಧಾರಣ ಮಳೆಯಾಗಿತ್ತು. ಒಳನಾಡಿನ ಬೆಳಗಾವಿಯ ಖಾನಾಪುರ, ಬೀದರ್ ನ ಬಾಲ್ಕಿ,ಮೈಸೂರಿನ ನಂಜನಗೂಡು ತಾಲ್ಲೂಕುಗಳ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.










