ರಾಂಚಿ: ಭಾರತ ವಿರುದ್ಧ ಇಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ನ ಅನುಭವಿ ಬ್ಯಾಟರ್ ಜೋ ರೂಟ್, ಅಮೋಘ ಶತಕ ಸಾಧನೆ ಮಾಡಿದ್ದಾರೆ.ರೂಟ್ ಅವರ ಸಮಯೋಚಿತ ಶತಕದ ಬೆಂಬಲದೊಂದಿಗೆ ಇಂಗ್ಲೆಂಡ್ ಮೊದಲ ದಿನದಂತ್ಯಕ್ಕೆ 90 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿದೆ. ಅಜೇಯ 106 ರನ್ ಗಳಿಸಿರುವ ರೂಟ್, ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅವರಿಗೆ
ಓಲಿ ರಾಬಿನ್ಸನ್ (31*) ಸಾಥ್ ನೀಡಿದ್ದಾರೆ. 112 ರನ್ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಂಗ್ಲರಿಗೆ ರೂಟ್ ಆಸರೆಯಾದರು.
ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಆಕಾಶ್ ದೀಪ್ ನಿಖರ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 57 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತ್ತು. ಆಕಾಶ್ ಜೊತೆಗೆ ಸ್ಪಿನ್ನರ್ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ಉತ್ತಮ ದಾಳಿ ಸಂಘಟಿಸಿದರು. ಪರಿಣಾಮ ಆಂಗ್ಲರ ಪಡೆ ಊಟದ ವಿರಾಮದ ಹೊತ್ತಿಗೆ 112ಕ್ಕೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.ಜಾಕ್ ಕ್ರಾಲಿ (42), ಬೆನ್ ಡಕೆಟ್ (11), ಓಲಿ ಪೋಪ್ (0), ಜಾನಿ ಬೆಸ್ಟೊ (38) ಹಾಗೂ ಬೆನ್ ಸ್ಟೋಕ್ಸ್ (3) ಪೆವಿಲಿಯನ್ಗೆ ಮರಳಿದರು.
ಈ ಹಂತದಲ್ಲಿ ಜೊತೆಗೂಡಿದ ಜೋ ರೂಟ್ ಹಾಗೂ ಬೆನ್ ಫೋಕ್ಸ್ ತಂಡಕ್ಕೆ ಆಸರೆಯಾದರು.ಭಾರತೀಯ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ರೂಟ್ ಆಕರ್ಷಕ ಶತಕ ಸಾಧನೆ ಮಾಡಿದರು. ಅವರಿಗೆ ಫೋಕ್ಸ್ ಉತ್ತಮ ಬೆಂಬಲ ನೀಡಿದರು. ಅಲ್ಲದೆ ಆರನೇ ವಿಕೆಟ್ಗೆ ಶತಕದ ಜೊತೆಯಾಟದಲ್ಲಿ ಭಾಗಿಯಾದರು.47 ರನ್ ಗಳಿಸಿದ ಫೋಕ್ಸ್ ಅರ್ಧಶತಕ ವಂಚಿತರಾದರು. ಬಳಿಕ ಬಂದ ಟಾಮ್ ಹಾರ್ಟ್ಲಿ 13 ರನ್ ಗಳಿಸಿ ಔಟ್ ಆದರು.
ಭಾರತದ ಪರ ಆಕಾಶ್ ದೀಪ್ ಮೂರು, ಮೊಹಮ್ಮದ್ ಸಿರಾಜ್ ಎರಡು ಮತ್ತು ರವೀಂದ್ರ ಜಡೇಜ ಹಾಗೂ ಆರ್. ಅಶ್ವಿನ್ ತಲಾ ಒಂದು ವಿಕೆಟ್ ಗಳಿಸಿದರು.