ಜಾಲ್ಸೂರು: ಜಾಲ್ಸೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ತಿರುಮಲೇಶ್ವರಿ ಅರ್ಭಡ್ಕ ಅವರ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ಗೊತ್ತುವಳಿ ಸಭೆ ಸದಸ್ಯರ ಕೋರಂ ಕೊರತೆಯಿಂದ ರದ್ದುಗೊಂಡಿದೆ. ಈ ಹಿನ್ನಲೆಯಲ್ಲಿ ಮುಂದಿನ ಆರು ತಿಂಗಳ ಅವಿಶ್ವಾಸ ಮಂಡನೆ ಮಾಡಲು ಅವಕಾಶ ಇಲ್ಲ ಎಂಬ ಹಿನ್ನಲೆಯಲ್ಲಿ ಉಪಾಧ್ಯಕ್ಷರಾಗಿ ತಿರುಮಲೇಶ್ವರಿ ಅವರೇ ಮುಂದುವರಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷರು ಸೇರಿ 13 ಮಂದಿ
ಸದಸ್ಯರು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿ ಪುತ್ತೂರು ಸಹಾಯಕ ಕಮೀಷನರ್ ಅವರಿಗೆ ಪತ್ರ ನೀಡಿದ್ದರು. ಈ ಹಿನ್ನಲೆಯಲ್ಲಿ ಅವಿಶ್ವಾಸ ನಿರ್ಣಯ ಗೊತ್ತುವಳಿಗೆ ಮಾ.29ರಂದು ಶನಿವಾರ ದಿನ ನಿಗದಿ ಮಾಡಲಾಗಿತ್ತು. ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಆದರೆ ಕೋರಂ ಕೊರತೆಯಿಂದ ಅವಿಶ್ವಾಸ ಮಂಡನೆ ಸಭೆ ನಡೆಯಲಿಲ್ಲ.
17 ಸದಸ್ಯರಲ್ಲಿ ಕೇವಲ 7 ಮಂದಿ ಮಾತ್ರ ಸಭೆಗೆ ಹಾಜರಾಗಿದ್ದರು. ಅವಿಶ್ವಾಸಕ್ಕೆ ಸಹಿ ಹಾಕಿದ 6 ಮಂದಿ ಸೇರಿ 10 ಮಂದಿ ಸಭೆಗೆ ಹಾಜರಾಗಿರಲಿಲ್ಲ. ಸದಸ್ಯರ ಹಾಜರಾಗುವಿಕೆಗೆ 12 ಗಂಟೆ ತನಕ ಸಮಯ ನೀಡಿದ್ದರೂ 9 ಮಂದಿ ಸದಸ್ಯರು ಮಾತ್ರ ಇದ್ದರು. ಕನಿಷ್ಠ 12 ಮಂದಿ ಸದಸ್ಯರು ಭಾಗವಹಿಸಬೇಕಿತ್ತು. 9 ಮಂದಿ ಮಾತ್ರ ಇದ್ದ ಕಾರಣ ಸಭೆ ರದ್ದುಗೊಂಡು ಅವಿಶ್ವಾಸ ಸಭೆ ರದ್ದುಗೊಂಡಿದೆ. ಇದರಿಂದ ತಿರುಮಲೇಶ್ವರಿ ಅವರು ಉಪಾಧ್ಯಕ್ಷ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಬಿಜೆಪಿ ಬೆಂಬಲಿತರಿಗೆ ಬಹುಮತ ಇರುವ ಜಾಲ್ಸೂರು ಗ್ರಾಮ ಪಂಚಾಯತ್ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಸಂದರ್ಭದಲ್ಲಿ ಉಂಟಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಬೆಂಬಲಿತ ತಿರುಮಲೇಶ್ವರಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.ಇದೀಗ ಮತ್ತೊಂದು ರಾಜಕೀಯ ಹೈಡ್ರಾಮ ನಡೆದು ಸದಸ್ಯರು ಗೈರು ಹಾಜರಾಗಿ ಸಭೆಯೇ ರದ್ದುಗೊಂಡು ಅವರು ತಮ್ಮ ಉಪಾಧ್ಯಕ್ಷ ಸ್ಥಾನ ಉಳಿಸಿಕೊಂಡಿದ್ದಾರೆ.