ಸುಳ್ಯ:ಸುಳ್ಯ-ಆಲೆಟ್ಟಿ- ಬಡ್ಡಡ್ಕ- ಕೂರ್ನಡ್ಕ ಜಿಲ್ಲಾ ಮುಖ್ಯ ರಸ್ತೆಯ ನಾಗಪಟ್ಟಣದ ಪಯಸ್ವಿನಿ ಸೇತುವೆಯ ದುರಸ್ತಿ ಕಾರ್ಯ ಆರಂಭಗೊಂಡಿದೆ. ಈ ಹಿನ್ನಲೆಯಲ್ಲಿ ಸೇತುವೆಯ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ. ರಸ್ತೆಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಕಿ.ಮೀ.0.80 ರಲ್ಲಿನ ಪಯಸ್ವಿನಿ ನದಿಯ ನಾಗಪಟ್ಟಣ ಸೇತುವೆಯ ದುರಸ್ಥಿ ಕೆಲಸದ ಪ್ರಯುಕ್ತ
ನವೆಂಬರ್ 30 ರವರೆಗೆ ಆಲೆಟ್ಟಿ-ಬಡ್ಡಡ್ಕ- ಕೂರ್ನಡ್ಕ ಮತ್ತು ಆಲೆಟ್ಟಿ-ಕೊಲ್ಚಾರು- ಕಣಕ್ಕೂರು-ಬಂದಡ್ಕ ಹಾಗೂ ಕೇರಳ ಭಾಗಕ್ಕೆ ಸಂಚರಿಸುವ ವಾಹನಗಳು ಜಿಲ್ಲಾ ಮುಖ್ಯ ರಸ್ತೆಯಾದ ಸುಳ್ಯ-ಕಾಂತಮಂಗಲ- ಅಜ್ಜಾವರ-ಮಂಡೆಕೋಲು-ಕನ್ಯಾನ ಮಾರ್ಗವಾಗಿ ಮತ್ತು ನಾರ್ಕೋಡು-ಅಜ್ಜಾವರ ಗ್ರಾಮೀಣ ರಸ್ತೆ ಮೂಲಕ ಸಂಚರಿಸುವಂತೆ ಹಾಗೂ ಆ ಭಾಗಗಳಿಂದ ಸುಳ್ಯಕ್ಕೆ ಬರುವ ವಾಹನಗಳು ಸಹ ಇದೇ ಮಾರ್ಗವಾಗಿ

ಸಂಚರಿಸುವಂತೆ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಆದೇಶ ನೀಡಿದ್ದರು. ಸೇತುವೆಯ ದುರಸ್ತಿ ಕಾರ್ಯಕ್ಕೆ ಒಂದು ತಿಂಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಸೇತುವೆ ದುರಸ್ತಿಗೆ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಸೇತುವೆಯ ಎರಡೂ ಕಡೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗಿದೆ.









