ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಾಮಾಜಿಕ ಬದ್ಧತೆ ಮಾದರಿ ಹಾಗೂ ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸುಳ್ಯ ಪ್ರೆಸ್ ಕ್ಲಬ್ನಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ
ಸದಸ್ಯರಿಗೆ ಅಂಚೆ ವಿಮೆ ನೋಂದಣಿ ಹಾಗೂ ಆರೋಗ್ಯ ಕಾರ್ಡ್ ವಿತರಣೆ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ಮತ್ತು ಶಿಕ್ಷಣ ಜನರಿಗೆ ಅತೀ ಅಗತ್ಯವಾದುದು. ಆದರೆ ಜನ ಸಾಮಾನ್ಯರಿಗೆ ಇದು ಪಡೆಯುವುದು ಇಂದು ದೊಡ್ಡ ಸವಾಲಾಗಿದೆ. ಪತ್ರಕರ್ತರ ಸಂಘದ ಸಾಮಾಜಿಕ ಬದ್ಧತೆಗೆ ಗ್ರಾಮ ವಾಸ್ತವ್ಯದಂತಹಾ ಕಾರ್ಯಕ್ರಮ ಅತ್ಯುತ್ತಮ ಉದಾಹರಣೆ ಎಂದ ಅವರು ಪತ್ರಕರ್ತರ ಸಂಘದ ಸಾಮಾಜಿಕ ಚಿಂತನೆ ಮತ್ತು ಕಾಳಜಿ ಮಾದರಿ ಎಂದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಆರೋಗ್ಯ ಕಾರ್ಡ್ ವಿತರಿಸಿದರು. ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕರಾದ ಮೋಹನ ಎಂ.ಕೆ. ಅಂಚೆ ವಿಮೆಯ ಕುರಿತು ಮಾಹಿತಿ ನೀಡಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಬಿ.ಎನ್.ಪುಷ್ಪರಾಜ್, ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಸ್ವಾಗತಿಸಿ, ಸುಳ್ಯ ತಾಲೂಕು ಸಂಘದ ಕಾರ್ಯದರ್ಶಿ ಗಿರೀಶ್ ಅಡ್ಪಂಗಾಯ ವಂದಿಸಿದರು.