ಲಂಡನ್: ತೆಂಡೂಲ್ಕರ್- ಆಂಡರ್ಸನ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯ ಇಂದಿನಿಂದ ಲಾರ್ಡ್ಸ್ನಲ್ಲಿ ಆರಂಭಗೊಳ್ಳಲಿದ್ದು
ಭಾರತ, ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಮೊದಲ ಟೆಸ್ಟ್ನಲ್ಲಿ ಸೋಲನುಭವಿಸಿದರೂ ಎಜ್ಬಾಸ್ಟನ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡವನ್ನು 336 ರನ್ ಅಂತರದಲ್ಲಿ ಪರಾಭವಗೊಳಿಸಿರುವುದು ಭಾರತದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ.ಅಮೋಘ ಲಯದಲ್ಲಿರುವ
ನಾಯಕ ಶುಭಮನ್ ಗಿಲ್ ಮೊದಲ ಇನಿಂಗ್ಸ್ನಲ್ಲಿ ದ್ವಿಶತಕ (269) ಗಳಿಸಿದರು. ಎರಡನೇ ಇನಿಂಗ್ಸ್ನಲ್ಲಿ ಶತಕ (161) ಬಾರಿಸಿ ತಂಡವನ್ನು ಜಯದ ಹಾದಿಯಲ್ಲಿ ಮುನ್ನಡೆಸಿದ್ದರು.
ಭಾರತದ ವೇಗದ ಜೋಡಿ ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಅವರ ಮಾರಕ ಬೌಲಿಂಗ್ನ ಭಾರತ್ಕೆ ಐತಿಹಾಸಿಕ ಜಯ ತಂದಿತ್ತು ಈ ಮೂಲಕ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು.
ಆದರೆ ‘ಕ್ರಿಕೆಟ್ ಕಾಶಿ’ ಲಾರ್ಡ್ಸ್ನಲ್ಲಿ ಪರಿಸ್ಥಿತಿ ವಿಭಿನ್ನವಾಗಿರುವ ಸಾಧ್ಯತೆ ಇದೆ. ಮೂರನೇ ಟೆಸ್ಟ್ನಲ್ಲಿ ಭಾರತ ತಂಡಕ್ಕೆ ಜಸ್ಪ್ರೀತ್ ಬೂಮ್ರಾ ಮತ್ತು ಇಂಗ್ಲೆಂಡ್ ಬಳಗಕ್ಕೆ ಬಿರುಗಾಳಿ ವೇಗದ ಬೌಲರ್ ಜೋಫ್ರಾ ಆರ್ಚರ್ ಮರಳುವರು. ಬೂಮ್ರಾ ಎಜ್ಬಾಸ್ಟನ್ನಲ್ಲಿ ವಿಶ್ರಾಂತಿ ಪಡೆದಿದ್ದರು. ಜೋಫ್ರಾ 2021ರಲ್ಲಿ ಅಹಮದಾಬಾದ್ ಟೆಸ್ಟ್ನಲ್ಲಿ ಆಡಿದ ನಂತರ ಗಾಯಗೊಂಡು ವಿಶ್ರಾಂತಿಯಲ್ಲಿದ್ದರು.
ಬೂಮ್ರಾ ಮರಳುವುದು ಖಚಿತವಾಗಿರುವುದರಿಂದ ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಬಹುತೇಕ ಖಚಿತವಾಗಿದೆ. ಆಕಾಶ್ ಅವರು ಕಳೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವುದರಿಂದಾಗಿ ಪ್ರಸಿದ್ಧಕೃಷ್ಣ ಅವರು ಹೊರಗುಳಿಯಬಹುದು.
ಎರಡನೇ ಸ್ಪಿನ್ನರ್ ಆಗಿ ವಾಷಿಂಗ್ಟನ್ ಸುಂದರ್ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆಗಳು ಹೆಚ್ಚು.
ಭಾರತ: ಶುಭಮನ್ ಗಿಲ್ (ನಾಯಕ) ರಿಷಭ್ ಪಂತ್ (ವಿಕೆಟ್ಕೀಪರ್/ಉಪನಾಯಕ) ಅಭಿಮನ್ಯು ಈಶ್ವರನ್ ಯಶಸ್ವಿ ಜೈಸ್ವಾಲ್ ಧ್ರುವ ಜುರೇಲ್ ಕರುಣ್ ನಾಯರ್ ಕೆ.ಎಲ್. ರಾಹುಲ್ ಸಾಯಿ ಸುದರ್ಶನ್ ರವೀಂದ್ರ ಜಡೇಜ ನಿತೀಶ್ ಕುಮಾರ್ ರೆಡ್ಡಿ ವಾಷಿಂಗ್ಟನ್ ಸುಂದರ್ ಆಕಾಶದೀಪ್ ಅರ್ಷದೀಪ್ ಸಿಂಗ್ ಜಸ್ಪ್ರೀತ್ ಬೂಮ್ರಾ ಕುಲದೀಪ್ ಯಾದವ್ ಮೊಹಮ್ಮದ್ ಸಿರಾಜ್ ಪ್ರಸಿದ್ಧಕೃಷ್ಣ ಶಾರ್ದೂಲ್ ಠಾಕೂರ್.
ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ) ಜೆಮಿ ಸ್ಮಿತ್ (ವಿಕೆಟ್ಕೀಪರ್) ಜ್ಯಾಕ್ ಕ್ರಾಲಿ ಬೆನ್ ಡಕೆಟ್ ಒಲಿ ಪೋಪ್ ಹ್ಯಾರಿ ಬ್ರೂಕ್ ಜೋ ರೂಟ್ ಕ್ರಿಸ್ ವೋಕ್ಸ್ ಬ್ರೈಡನ್ ಕಾರ್ಸ್ ಜೋಫ್ರಾ ಆರ್ಚರ್ ಶೋಯಬ್ ಬಶೀರ್.
ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ)
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ಜಿಯೊ ಹಾಟ್ಸ್ಟಾರ್ ಆ್ಯಪ್














