ದುಬೈ:ನಾಯಕ ರೋಹಿತ್ ಶರ್ಮ ಅವರ ಜವಾಬ್ದಾರಿಯುತ ಆಕರ್ಷಕ ಅರ್ಧ ಶತಕ, ಬ್ಯಾಟರ್ಗಳು ಹಾಗೂ ಬೌಲರ್ಗಳ ಸಂಘಟಿತ ಪ್ರಯತ್ನದ ಫಲವಾಗಿ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ ಅಂತರದಲ್ಲಿ ಮಣಿಸಿ ಟೀಂ ಇಂಡಿಯಾ 12 ವರ್ಷಗಳ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ
ಕೀವಿಸ್ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತ್ತು.ಗುರಿ ಬೆನ್ನಟ್ಟಿದ ಭಾರತ 49 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿ ಜಯ ಭೇರಿ ಬಾರಿಸಿತು.ಭಾರತದ ಪರ ನಾಯಕ ರೋಹಿತ್ ಶರ್ಮ ಆಕರ್ಷಕ ಅರ್ಧ ಶತಕ ಗಳಿಸಿದರು. ರೋಹಿತ್ 83 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 76 ರನ್ ಗಳಿಸಿದರು. ಶುಭ್ಮನ್ ಗಿಲ್ 50 ಎಸೆತಗಳಲ್ಲಿ ಒಂದು ಸಿಕ್ಸರ್ ನೆರವಿನಿಂದ 31 ರನ್ ಗಳಿಸಿದರು. ರೋಹಿತ್ ಹಾಗೂ ಗಿಲ್ ಪ್ರಥಮ ವಿಕೆಟ್ಗೆ 18.4 ಓವರ್ಗಳಲ್ಲಿ 105 ರನ್ ಗಳಿಸಿ ಭದ್ರ ಬುನಾದಿ ಹಾಕಿದರು. ಆದರೆ ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿ ನಿರಾಸೆ ಮೂಡಿಸಿದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಅಕ್ಸರ್ ಪಟೇಲ್ 61 ರನ್ಗಳ ಉಪಯುಕ್ತ ಇನ್ನೀಂಗ್ಸ್ ಕಟ್ಟಿದರು. ಅಯ್ಯರ್ 62 ಎಸೆತಗಳಲ್ಲಿ ತಲಾ ಎರಡು ಸಿಕ್ಸರ್ ಮತ್ತು ಬೌಂಡರಿ ನೆರವಿನಿಂದ 48 ರನ್ ಗಳಿಸಿ ಎರಡು ರನ್ ಅಂತರದಲ್ಲಿ ಅರ್ಧ ಶತಕ ತಪ್ಪಿಸಿಕೊಂಡರು. ಅಕ್ಸರ್ ಪಟೇಲ್ 40 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್ ಮತ್ತು ಬೌಂಡರಿ ನೆರವಿನಿಂದ 29ರನ್ ಗಳಿಸಿದರು. ಬಳಿಕ ಕೆ.ಎಲ್.ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಉತ್ತಮ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನ ಸನಿಹ ತಂದರು. ಈ ಹಂತದಲ್ಲಿ 18 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್ ಮತ್ತು ಬೌಂಡರಿ ನೆರವಿನಿಂದ 18 ರನ್ ಗಳಿಸಿದ ಹಾರ್ದಿಕ್ ಪಂಡ್ಯ ಔಟ್ ಆದರು. ಬಳಿಕ ರಾಹುಲ್ ಮತ್ತು ರವೀಂದ್ರ ಜಡೇಜ ತಂಡವನ್ನು ಗೆಲುವಿನ ದಡ ಸೇರಿಸಿದರು.
ರಾಹುಲ್ 33 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್ ಮತ್ತು ಬೌಂಡರಿ ನೆರವಿನಿಂದ ಅಜೇಯ 34 ರನ್ ಗಳಿಸಿದರೆ,ಜಡೇಜ ಅಜೇಯ 9 ರನ್ ಗಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ಗೆ ವಿಲ್ ಯಂಗ್ ಮತ್ತು ರಚಿನ್ ರವೀಂದ್ರ ಉತ್ತಮ ಆರಂಭ ನೀಡಿದರು. 29 ಎಸೆತಗಳಲ್ಲಿ 37 ರನ್ ಗಳಿಸಿದ್ದಾಗ ರಚಿನ್ ಕುಲದೀಪ್ ಯಾದವ್ ಎಸೆತದಲ್ಲಿ ಬೌಲ್ಡ್ ವಿಲ್ ಯಂಗ್ 15 ರನ್, ಕೇನ್ ವಿಲಿಯಮ್ಸನ್ 11 ರನ್ ಗಳಿಸಿ
ಔಟಾದರು.ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಡೇರಿಲ್ ಮಿಚೆಲ್ ಅವರು 101 ಎಸೆತಗಳಲ್ಲಿ 63 ರನ್ ಗಳಿಸಿದರು. ಗ್ಲೆನ್ ಫಿಲಿಪ್ 34 ರನ್ ಬಾರಿಸಿದರು. ಕೊನೆಯಲ್ಲಿ ಬಿರುಸಿನ ಆಟ ಆಡುದ ಮಿಚೆಲ್ ಬ್ರೇಸ್ವೆಲ್ ಅರ್ಧ ಶತಕ ಗಳಿಸಿದರು. ಬ್ರೇಸ್ವೆಲ್ 40 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿದರು.
ಭಾರತದ ಪರ ಶಿಸ್ತು ಬದ್ಧ ದಾಳಿ ಸಂಘಟಿಸಿದ ಸ್ಪಿನ್ನರ್ಗಳಾದ
ವರುಣ್ ಚಕ್ರವರ್ತಿ ಹಾಗೂ ಕುಲದೀಪ್ ಯಾದವ್ ತಲಾ 2 ವಿಕೆಟ್ ಕಿತ್ತರೆ ಶಮಿ ಹಾಗೂ ಜಡೇಜಾ ತಲಾ 1 ವಿಕೆಟ್ ಕಿತ್ತರು.