ಕೋಲ್ಕತ್ತ:ವಿರಾಟ್ ಕೊಹ್ಲಿ ಶತಕ, ರವೀಂದ್ರ ಜಡೇಜ ಐದು ವಿಕೆಟ್ ಗೊಂಚಲು, ಬ್ಯಾಟರ್ಗಳು ಮತ್ತು ಬೌಲರ್ಗಳ ಸಂಘಟಿತ ಪ್ರಯತ್ನದಿಂದ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ಗಳ ದಾಖಲೆಯ ಅಂತರದ ಗೆಲುವು ದಾಖಲಿಸಿದೆ. ಈ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಎಂಟನೇ ಜಯ ದಾಖಲಿಸಿದೆ. ಭಾರತ ನೀಡಿದ 327 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಭಾರತದ ಬೌಲಿಂಗ್ ದಾಳಿಯ ಮುಂದೆ
ಕುಸಿದು 27.1 ಓವರ್ಗಳಲ್ಲಿ 83 ರನ್ಗೆ ಆಲ್ ಔಟ್ ಆಯಿತು.ರನ್ ಗಳಿಸಲು ಪರದಾಡಿದ ಆಫ್ರಿಕಾ ಬ್ಯಾಟರ್ಗಳು ಬಲು ಬೇಗನೇ ಮರಳಿದರು. ಕ್ವಿಂಟನ್ ಡಿಕಾಕ್ 5, ನಾಯಕ ತೆಂಬಾ ಬಹುಮ 11, ರಸ್ಸಿ ವಾನ್ ಡರ್ ಡಸ್ 13, ಏಡನ್ ಮರ್ಕರಂ 9, ಕ್ಲಾಸೆನ್ 1,ಡೇವಿಡ್ ಮಿಲ್ಲರ್ 11, ಜಾನ್ಸನ್ 14ರನ್ ಗಳಿಸಿ ಪೆವಿಲಿಯನ್ ಸೇರಿದರು. ಭಾರತದ ಪರ ರವೀಂದ್ರ ಜಡೇಜ 33 ರನ್ ನೀಡಿ 5 ವಿಕೆಟ್ ಉರುಳಿಸಿದರು. ಮಹಮ್ಮದ್ ಶಮಿ,ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್ ಹಾಗೂಮಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತು.ವಿರಾಟ್ ಕೊಹ್ಲಿ ಭರ್ಜರಿ ಶತಕ ದಾಖಲಿಸಿದರು. ವಿರಾಟ್ ಕೊಹ್ಲಿ 121 ಎಸೆತಗಳಲ್ಲಿ 10 ಬೌಂಡರಿ ನೆವಿನಿಂದ ಅಜೇಯ 101 ರನ್ ಗಳಿಸಿದರು.ಏಕದಿನ ಕ್ರಿಕೆಟ್ ಮಾದರಿಯಲ್ಲಿ
49 ಶತಕ ದಾಖಲಿಸುವುದರೊಂದಿಗೆ ಸಚಿನ್ ಅವರ ಹೆಸರಲ್ಲಿದ್ದ ಅತೀ ಹೆಚ್ಚು ಶತಕದ ದಾಖಲೆ ಸರಿಗಟ್ಟಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತಕ್ಕೆ ನಾಯಕ ರೋಹಿತ್ ಶರ್ಮ ಹಾಗೂ ಶುಭ್ಮನ್ ಗಿಲ್ ಸ್ಪೋಟಕ ಆರಂಭ ನೀಡಿದರು. ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದ ಅವರು ಮೊದಲ ವಿಕೆಟ್ಗೆ 5.5 ಓವರ್ಗಳಲ್ಲಿ 62 ರನ್ ಕಲೆ ಹಾಕಿದರು. 24 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 40 ರನ್ ಗಳಿಸಿದ ರೋಹಿತ್ ಹಾಗೂ 24 ಎಸೆತಗಳಲ್ಲಿ 23 ರನ್ ಬಾರಿಸಿ ಶುಭ್ಮನ್ ಗಿಲ್ ಔಟ್ ಆದರು. ಬಳಿಕ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ 3ನೇ ವಿಕೆಟ್ಗೆ 134 ರನ್ ಕಲೆ ಹಾಕಿದರು. ಅಯ್ಯರ್ 87 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 77 ರನ್ ಬಾರಿಸಿದರು. ಕೊನೆಯಲ್ಲಿ 14 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 22 ರನ್ ಬಾರಿಸಿದ ಸೂರ್ಯಕುಮಾರ್ ಯಾದವ್ ಹಾಗೂ 15 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 29 ರನ್ ಗಳಿಸಿದ ರವೀಂದ್ರ ಜಡೇಜ ಭಾರತದ ಸ್ಕೋರ್ ಏರಿಸಿದರು. ವಿರಾಟ್ ಕೊಹ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.











