ಟೋಕಿಯೊ: ಟಿ20 ವಿಶ್ವ ಚಾಂಪಿಯನ್ ಭಾರತ ತಂಡ, ಕ್ರಿಕೆಟ್ ಶಿಶು ಜಪಾನ್ ವಿರುದ್ಧ ಮಂಗಳವಾರ ಸೋಲಿನ ಭೀತಿಯಿಂದ ಸ್ವಲ್ಪದರಲ್ಲೇ ಪಾರಾಯಿತು. ಪ್ರತಿಕೂಲ ಹವಾಮಾನದಿಂದ ಮಂಗಳವಾರ ಐದು ಓವರುಗಳಿಗೆ ಮೊಟಕುಗೊಂಡಿದ್ದ ಟಿ20 ಅಂತರರಾಷ್ಟ್ರೀಯ ಪಂದ್ಯವನ್ನು ಭಾರತ ಎರಡು ರನ್ಗಳಿಂದ ಗೆದ್ದುಕೊಂಡಿತು. ಸ್ಪಿನ್ನರ್
ಅಕ್ಷರ್ ಪಟೇಲ್ (2–0–7–0) ಅವರು ಅನನುಭವಿ ಜಪಾನ್ ಬ್ಯಾಟರ್ಗಳನ್ನು ಸಕಾಲದಲ್ಲಿ ಕಟ್ಟಿಹಾಕಿದ್ದರಿಂದ ಭಾರತ ತಂಡವು ಈ ರೋಚಕ ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಭಾರತ ಮತ್ತು ಜಪಾನ್ ನಡುವೆ ರಾಜತಾಂತ್ರಿಕ ಸಂಬಂಧಗಳಿಗೆ 75 ವರ್ಷ ತುಂಬಿದ್ದ ನೆನಪಿಗಾಗಿ ಇದೇ ಮೊದಲ ಬಾರಿ ಈ ಎರಡು ತಂಡಗಳ ನಡುವೆ ಈ ಪಂದ್ಯ ಏರ್ಪಡಿಸಲಾಗಿತ್ತು. ಪ್ರತಿಕೂಲ ಹವಾಮಾನದ ಕಾರಣ ಪಂದ್ಯವನ್ನು 20 ಓವರುಗಳ ಬದಲು 5 ಓವರುಗಳಿಗೆ ಇಳಿಸಲಾಯಿತು.
ಟಾಸ್ ಗೆದ್ದ ಭಾರತ 4 ವಿಕೆಟ್ಗೆ 32 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಲ್ಲಿ ಎರಡೇ ಬೌಂಡರಿಗಳಿದ್ದವು. ನಾಯಕ ಶ್ರೇಯಸ್ ಅಯ್ಯರ್ (16, 12 ಎಸೆತ) ಮಾತ್ರ ಎರಡಂಕೆಯ ಮೊತ್ತ ಗಳಿಸಿದರು.ಜಪಾನ್ ತಂಡ ಕೊನೆಯ ಎಸೆತದವರೆಗೂ ಹೋರಾಡಿ 2 ವಿಕೆಟ್ಗೆ 30 ರನ್ ಬಾರಿಸಿ ಹೋರಾಟ ತೋರಿತು.






